ಕೋಲ್ಕತ್ತಾ(ಪಶ್ಚಿಮ ಬಂಗಾಳ):ಭಾರೀ ಆಕ್ರೋಶಕ್ಕೆ ಕಾರಣವಾಗಿರುವ ಸಂದೇಶ್‌ಖಾಲಿ ಹಿಂಸಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ದಳಕ್ಕೆ (ಸಿಐಡಿ) ಗುರುವಾರ ರಾಜ್ಯ ಸರ್ಕಾರ ವಹಿಸಿದೆ. ಇದೇ ವೇಳೆ ಬಂಧಿತ ಪ್ರಮುಖ ಆರೋಪಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶೇಖ್ ಷಹಜಹಾನ್‌ನನ್ನು ಕೋರ್ಟ್ 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಭೂ ಕಬಳಿಕೆ, ಹಿಂಸಾಚಾರ, ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಶೇಖ್ ಷಹಜಹಾನ್‌ನನ್ನು ಬುಧವಾರ ರಾತ್ರಿ ಬಂಧಿಸಲಾಗಿತ್ತು. ಬಳಿಕ ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಿದ ಪೊಲೀಸರು 14 ದಿನಗಳ ಕಾಲ ಕಸ್ಟಡಿಗೆ ನೀಡಬೇಕು ಎಂದು ಕೋರಿದರು. ಕೋರ್ಟ್ 10 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ಇದರ ಬೆನ್ನಲ್ಲೇ, ಪ್ರಕರಣದ ನ್ಯಾಯಯುತ ತನಿಖೆಗಾಗಿ ಪಶ್ಚಿಮ ಬಂಗಾಳ ಪೊಲೀಸರ ಬದಲಿಗೆ ಸಿಐಡಿಗೆ ನೀಡಬೇಕು ಎಂದು ಒತ್ತಾಯ ಕೇಳಿಬಂದಿತ್ತು. ಇದರಿಂದ ಸರ್ಕಾರ ಪ್ರಕರಣದ ತನಿಖೆಯಲ್ಲಿ ಸಿಐಡಿಗೆ ನೀಡಿ ಗುರುವಾರ ಆದೇಶಿಸಿದೆ. ಅಕ್ರಮ ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ಶೇಖ್ ಷಹಜಹಾನ್ ಮನೆ ಮೇಲೆ ಇಡಿ ಅಧಿಕಾರಿಗಳು ಜನವರಿ 5ರಂದು ಶೋಧ ಕಾರ್ಯಾಚರಣೆಗೆ ಬಂದಾಗ, ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಅಲ್ಲದೇ, ಮಹಿಳೆಯನ್ನು ಎಳೆದೊಯ್ದ ಟಿಎಂಸಿ ಕಚೇರಿಯೊಳಗೆ ಅತ್ಯಾಚಾರ ನಡೆಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಪೊಲೀಸ್ ಕಸ್ಟಡಿಯಲ್ಲಿರುವ ಶೇಖ್ ಷಹಜಾನ್‌ನನ್ನು ಮುಂದಿನ 10 ದಿನಗಳ ಕಾಲ ಭಬಾನಿ ಭವನದಲ್ಲಿರುವ ಸಿಐಡಿ ಲಾಕ್‌ಅಪ್‌ನಲ್ಲಿ ಇರಿಸಲಾಗುವುದು. ಸಿಐಡಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ರಾಜ್ಯ ಪೊಲೀಸ್ ಮೂಲಗಳು ತಿಳಿಸಿವೆ.