ಮುಂಬೈ:ಇಲ್ಲಿನ ರಾಜ್‌ಕೋಟ್ ಕೋಟೆಯಲ್ಲಿ ಕುಸಿದು ಬಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣದ ಶಿಲ್ಪಿ-ಗುತ್ತಿಗೆದಾರ ಜಯದೀಪ್ ಆಪ್ಟೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಮೆ ಕುಸಿದ ಬೆನ್ನಲ್ಲೇ ನಾಪತ್ತೆಯಾಗಿದ್ದ ಆಪ್ಟೆಯನ್ನು ಥಾಣೆ ಜಿಲ್ಲೆಯ ಕಲ್ಯಾಣ್‌ನಿಂದ ಬಂಧಿಸಲಾಗಿದೆ.
ಒಂಭತ್ತು ತಿಂಗಳ ಹಿಂದೆ ನಿರ್ಮಾಣವಾಗಿದ್ದ ಪ್ರತಿಮೆ ಆಗಸ್ಟ್ 26ರಂದು ಕುಸಿದು ಬಿದ್ದ ಬಳಿಕ ಆಪ್ಟೆಗೆ (24) ಸಿಂಧುದುರ್ಗ ಪೊಲೀಸರು ಹುಡುಕಾಟ ನಡೆಸಿದ್ದರು. ಈತನ ಪತ್ತೆಗಾಗಿ ಏಳು ಜನರ ತಂಡವನ್ನು ರಚಿಸಲಾಗಿತ್ತು.
ಪ್ರತಿಮೆ ಕುಸಿದ ಬಳಿಕ ಮಲ್ವಾನ್ ಪೊಲೀಸರು ಆಪ್ಟೆ ಮತ್ತು ಸಲಹೆಗಾರ ಚೇತನ್ ಪಾಟೀಲ್ ವಿರುದ್ಧ ನಿರ್ಲಕ್ಷ್ಯ ಮತ್ತು ಉದಾಸೀನ ತೋರಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಕಳೆದ ವಾರ ಕೊಲ್ಹಾಪುರದಲ್ಲಿ ಪಾಟೀಲ್ ಬಂಧನವಾಗಿತ್ತು.
ಮರಾಠ ರಾಜ್ಯ ಸಂಸ್ಥಾಪಕ ಶಿವಾಜಿ ಪ್ರತಿಮೆ ಕುಸಿದ ಬಳಿಕ ರಾಜ್ಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಸಿಎಂ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡು ಪ್ರತಿಪಕ್ಷಗಳು ಟೀಕಾಸಮರ ನಡೆಸಿದ್ದವು.
ಆಪ್ಟೆ ಬಂಧನ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಪ್ರವೀಣ್ ದರೇಖ್, "ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದವರು ಈಗ ಬಾಯಿ ಮುಚ್ಚಿಕೊಳ್ಳಬೇಕು. ಜಯದೀಪ್ ಬಂಧನಕ್ಕೆ ಪೊಲೀಸರು ಕೊಂಚ ಸಮಯ ತೆಗೆದುಕೊಂಡರು. ಆತನ ಬಂಧನದ ಲಾಭವನ್ನು ನಾವು ಪಡೆಯುತ್ತಿಲ್ಲ. ಪೊಲೀಸರು ಅವರ ಕೆಲಸ ನಿರ್ವಹಿಸಿದ್ದಾರೆ" ಎಂದು ಹೇಳಿದ್ದಾರೆ.
ಇದಕ್ಕೆ ಶಿವಸೇನೆ ಯುಬಿಟಿ ನಾಯಕಿ ಸುಷ್ಮಾ ಆಂಧರೆ ಪ್ರತಿಕ್ರಿಯಿಸಿ, "ಆಪ್ಟೆ ಬಂಧನದ ಕುರಿತು ಸರ್ಕಾರ ಕ್ರೆಡಿಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಸರ್ಕಾರ ಅದರ ಕೆಲಸ ಮಾಡಿದೆ. ಆತ ಅಂಡರ್ವರ್ಲ್ಡ್ ಡಾನ್ ಅಲ್ಲ. ಬೇಗ ಬಂಧಿಸಬೇಕಿತ್ತು" ಎಂದಿದ್ದಾರೆ.
ಈ ನಡುವೆ ಪ್ರತಿಮೆ ಕುಸಿದ ಪ್ರದೇಶಕ್ಕೆ ಐವರು ಸದಸ್ಯರ ಜಂಟಿ ತಾಂತ್ರಿಕ ಸಮಿತಿ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದೆ. ಪ್ರತಿಮೆ ನಿರ್ಮಾಣಕ್ಕೆ ಬಳಸಿದ ವಸ್ತು ಮತ್ತು ವೇದಿಕೆಯ ಮಾದರಿಯನ್ನು ರಾಸಾಯನಿಕ ವಿಶ್ಲೇಷಣೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪ್ರತಿಮೆಗಾಗಿ ರಾಜ್ಯದ ಬೊಕ್ಕಸದಿಂದ 236 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ, ಕೇವಲ 1.5 ಕೋಟಿ ರೂಪಾಯಿ ಮಾತ್ರ ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಶಿವಾಜಿ ಪ್ರತಿಮೆ ಕುಸಿತ ಪ್ರಕರಣ: ತಲೆಬಾಗಿ ಕ್ಷಮೆ ಕೋರುತ್ತೇನೆ ಎಂದ ಪ್ರಧಾನಿ