ನವದೆಹಲಿ:ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಶತಮಾನಗಳ ಆಸೆ ಈಡೇರಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಹೇಳಿದರು. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದ ಕೆಲಸಗಳನ್ನು ಅವರು ಶ್ಲಾಘಿಸಿದರು. ಹೊಸ ಸಂಸತ್ ಕಟ್ಟಡದಲ್ಲಿ ಪ್ರಥಮ ಬಾರಿಗೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಮುರ್ಮು, ಹಿಂದಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಾಗ ಮತ್ತು ಭವಿಷ್ಯ ನಿರ್ಮಾಣಕ್ಕೆ ಗರಿಷ್ಠ ಶಕ್ತಿಯಿಂದ ಶ್ರಮಿಸಿದರೆ ಮಾತ್ರ ದೇಶವು ವೇಗವಾಗಿ ಪ್ರಗತಿ ಸಾಧಿಸಬಹುದು ಎಂದು ಹೇಳಿದರು.
"ಕಳೆದ ಹತ್ತು ವರ್ಷಗಳಲ್ಲಿ ಜನತೆ ದಶಕಗಳಿಂದ ಕಾಯುತ್ತಿದ್ದ ಹಲವಾರು ಯೋಜನೆಗಳು ದೇಶದಲ್ಲಿ ಪೂರ್ಣಗೊಂಡಿವೆ. ರಾಮ ಮಂದಿರವನ್ನು ನಿರ್ಮಿಸುವ ಬಯಕೆ ಶತಮಾನಗಳಿಂದ ಇತ್ತು ಮತ್ತು ಇಂದು ಅದು ನನಸಾಗಿದೆ" ಎಂದು ಅವರು ನುಡಿದರು. ರಾಷ್ಟ್ರಪತಿಗಳ ಈ ಮಾತಿಗೆ ಆಡಳಿತ ಪಕ್ಷದ ಸಂಸದರು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿನ 370 ನೇ ವಿಧಿಯನ್ನು ತೆಗೆದುಹಾಕುವ ಬಗ್ಗೆ ಹಲವಾರು ಸಂಶಯಗಳಿದ್ದವು, ಆದರೆ ಅವು ಈಗ ಇತಿಹಾಸವಾಗಿವೆ ಎಂದು ಅವರು ಹೇಳಿದರು.
ಭಾರತೀಯ ಆರ್ಥಿಕತೆಯು ದುರ್ಬಲ ಐದು ಆರ್ಥಿಕತೆಗಳಲ್ಲೊಂದಾಗಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಸರ್ಕಾರ ಕೈಗೊಂಡ ಹಲವಾರು ಸುಧಾರಣೆಗಳಿಂದಾಗಿ ಈಗ ಅದು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ವೇಗದಲ್ಲಿ ಚಲಿಸುತ್ತಿದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.