ಬೆಳಗಾವಿ: ಇವರು ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆ ಚಂದಗಡ ತಾಲೂಕಿನ ಖಾನಟ್ಟಿ ಗ್ರಾಮದವರು. ಆದರೆ, ಇವರ ಬದುಕಿಗೆ ಆಸರೆಯಾಗಿದ್ದು ಮಾತ್ರ ಕರ್ನಾಟಕ. ಕರ್ನಾಟಕದಲ್ಲಿರುವ ಅದೆಷ್ಟೋ ಮರಾಠಿಗರು ಕನ್ನಡ ಮಾತಾಡುವುದಿಲ್ಲ. ಆದರೆ, ಕೂಲಿ ಕೆಲಸಕ್ಕೆ ಮಹಾರಾಷ್ಟ್ರದಿಂದ ಬಂದಿರುವ ಈ ಮಹಿಳೆಯರು ಬಾಯ್ತುಂಬ ಅಚ್ಚ ಕನ್ನಡ ಮಾತಾಡುವುದನ್ನು ಕೇಳುವುದೇ ಚಂದ. ಅಲ್ಲದೇ ಈ ಕನ್ನಡ ನಾಡಿನ ಅನ್ನದಾತರು ಕೊಟ್ಟ ಕೆಲಸದಿಂದ ನಮ್ಮ ಬದುಕಿನ ಬಂಡಿ ಸಾಗುತ್ತಿದೆ ಎಂದು ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿಯಲ್ಲಿ ಭತ್ತದ ಸುಗ್ಗಿಗೆ ಮಹಾರಾಷ್ಟ್ರ ಕಾರ್ಮಿಕರ ಸಾಥ್: ಬೆಳಗಾವಿ ಸುತ್ತಮುತ್ತಲಿನ ಕಡೋಲಿ, ಜಾಫರವಾಡಿ ಸೇರಿ ಮತ್ತಿತರ ಗ್ರಾಮಗಳಲ್ಲಿ ಭತ್ತದ ಸುಗ್ಗಿ ಜೋರಾಗಿದೆ. ಈ ಭಾಗದ ಬಹಳಷ್ಟು ಕೂಲಿ ಕಾರ್ಮಿಕರು ನರೇಗಾ ಕೆಲಸಕ್ಕೆ ಹೋಗುವುದರಿಂದ ಕೃಷಿ ಕಾರ್ಮಿಕರು ಕೊರತೆ ಉಂಟಾಗಿದೆ. ಪರಿಣಾಮ ಪಕ್ಕದ ಮಹಾರಾಷ್ಟ್ರದಿಂದ ಕೆಲಸಗಾರರನ್ನು ರೈತರು ಕರೆದುಕೊಂಡು ಬರುತ್ತಿದ್ದಾರೆ. ಒಂದು ದಿನಕ್ಕೆ ಒಬ್ಬರಿಗೆ 300 ರೂ. ಕೂಲಿ ನಿಗದಿಪಡಿಸಿದ್ದಾರೆ. ಬಾಡಿಗೆ ವಾಹನದಲ್ಲಿ ಇವರನ್ನು ಬೆಳಗ್ಗೆ ಕರೆದುಕೊಂಡು ಬರುವ ರೈತರು, ಸಾಯಂಕಾಲ ವಾಪಸ್ ಬಿಟ್ಟು ಬರುತ್ತಿದ್ದಾರೆ. ಇದು ಇಲ್ಲಿನ ರೈತರಿಗೆ ಹೊರೆಯಾಗಿ ಪರಿಣಮಿಸಿದರೂ ಅನಿವಾರ್ಯವಾಗಿದೆ.
ಯಲ್ಲವ್ವ ಮಾರುತಿ ಬಗನಾಳೆ ಎಂಬವರು ಈಟಿವಿ ಭಾರತ ಜೊತೆಗೆ ಮಾತನಾಡಿ, "ನಮ್ಮಲ್ಲಿ ಏನೂ ಕೆಲಸ ಇಲ್ಲ. ಹಾಗಾಗಿ, ಕರ್ನಾಟಕಕ್ಕೆ ದುಡಿಯಲು ಬಂದಿದ್ದೇವೆ. ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಯಾವುದೇ ಸೌಲಭ್ಯಗಳಿಲ್ಲ. ಕರ್ನಾಟಕದಲ್ಲಿನ ಮಹಿಳೆಯರು ಸುಖದಿಂದಿದ್ದಾರೆ. ನಮ್ಮ ವಯಸ್ಸಿನ ಇಲ್ಲಿನ ಮಹಿಳೆಯರು ಯಾರೂ ದುಡಿಯುತ್ತಿಲ್ಲ. ಇದೆಲ್ಲಾ ನೋಡಿದರೆ ಕರ್ನಾಟಕವೇ ಬೆಸ್ಟ್" ಎಂದು ಹೇಳಿದರು. ಹಾಗಾದರೆ ನೀವು ಕರ್ನಾಟಕಕ್ಕೆ ಸೇರುತ್ತೀರಾ ಎಂಬ ಪ್ರಶ್ನೆಗೆ, "ನಮ್ಮನ್ನು ಸೇರಿಸಿಕೊಳ್ಳಬೇಕಲ್ಲಾ" ಎಂದು ನಗುತ್ತಲೇ ಮರು ಪ್ರಶ್ನಿಸಿದರು.
"ಮೊದಲು ಭತ್ತದ ನಾಟಿಗೆ ಬಂದಿದ್ದೆವು. ಈಗ ಕಟಾವಿಗೂ ಬಂದಿದ್ದೇವೆ. ಕರ್ನಾಟಕ ರೈತರು ಕೆಲಸ ಕೊಟ್ಟಿದ್ದರಿಂದ ಇಂದು ನಮ್ಮ ಮನೆ ನಡೆಯುತ್ತಿದೆ" ಎನ್ನುತ್ತಾರೆ ಗಂಗೂಬಾಯಿ ಲಕ್ಕಪ್ಪ ನಾಗಾಜಿ.
ಕಡೋಲಿ ರೈತ ವಿಶ್ವನಾಥ ಬಾಳೇಕುಂದ್ರಿ ಮಾತನಾಡಿ, "ನಮ್ಮೂರಿನವರು ನರೇಗಾ ಕೆಲಸಕ್ಕೆ ಹೋಗುತ್ತಿದ್ದಾರೆ. ಭತ್ತದ ಕಟಾವಿಗೆ ಯಾರೂ ಬರುತ್ತಿಲ್ಲ. ಹಾಗಾಗಿ, ಮಹಾರಾಷ್ಟ್ರದ ಖಾನಟ್ಟಿ, ರಾಜಗೋಳಿ ಸೇರಿ ಮತ್ತಿತರ ಹಳ್ಳಿಗಳಿಂದ ಜನರನ್ನು ಕರೆಸುತ್ತಿದ್ದೇವೆ. ನಿತ್ಯ ಸುಮಾರು 200ಕ್ಕೂ ಅಧಿಕ ಜನ ಕಡೋಲಿ, ಜಾಫರವಾಡಿಗೆ ಬರುತ್ತಿದ್ದಾರೆ. ಮಹಿಳೆಯರಿಗೆ 300 ರೂ., ಪುರುಷರಿಗೆ 400 ರೂ. ಕೂಲಿ ಹಣ ಕೊಡುತ್ತಿದ್ದೇವೆ. ಮತ್ತೆ ಅವರನ್ನು ಕರೆಯಲು ಮತ್ತು ಕಳಿಸಲು ವಾಹನದ ವ್ಯವಸ್ಥೆಯನ್ನೂ ನಾವೇ ಮಾಡಬೇಕು. ಖರ್ಚು ಹೆಚ್ಚಾಗುತ್ತಿದ್ದು, ಬೆಳೆ ಹಾಳಾಗಬಾರದು ಅಂತಾ ಈ ರೀತಿ ಮಾಡುತ್ತಿದ್ದೇವೆ" ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಗೆ ಬಹುಪರಾಕ್: ಪ್ರತಿ ತಿಂಗಳು ಮನೆ ಯಜಮಾನಿಗೆ 2 ಸಾವಿರ ರೂ. ಹಣ ನೀಡುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮೀ ಯೋಜನೆ ಕೇವಲ ಕರ್ನಾಟಕದಲ್ಲಿ ಮಾತ್ರ ಮೆಚ್ಚುಗೆ ಗಳಿಸಿಲ್ಲ. ಪಕ್ಕದ ಮಹಾರಾಷ್ಟ್ರದ ಮಹಿಳೆಯರು ಕೂಡ ಬಹುಪರಾಕ್ ಎನ್ನುತ್ತಿದ್ದಾರೆ. ಕರ್ನಾಟಕದ ಮಹಿಳೆಯರು ತುಂಬಾ ಪುಣ್ಯ ಮಾಡಿದ್ದಾರೆ. ಇಂಥ ಯೋಜನೆಗಳ ಲಾಭ ಪಡೆದುಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂಬುದು ಅವರ ಅಭಿಪ್ರಾಯ.
ಸುಗ್ಗಿಯಲ್ಲಿ ನರೇಗಾ ಬಂದ್ ಮಾಡಿ: ಈಗ ಎಲ್ಲೆಡೆ ಭತ್ತದ ಕೊಯ್ಲು ಮತ್ತು ರಾಶಿ ಜೋರಾಗಿದೆ. ಇಂಥ ಸಂದರ್ಭದಲ್ಲಿ ನರೇಗಾ ಕೆಲಸ ಕೊಟ್ಟರೆ ಕೂಲಿ ಕಾರ್ಮಿಕರು ಕಟಾವಿಗೆ ಯಾರೂ ಬರುವುದಿಲ್ಲ. ಹಾಗಾಗಿ, ಭತ್ತದ ಸುಗ್ಗಿ ಮುಗಿಯೋವರೆಗೂ ನರೇಗಾ ಕೂಲಿ ಕೆಲಸ ಸ್ಥಗಿತಗೊಳಿಸಿ ಅನುಕೂಲ ಮಾಡಿ ಕೊಡುವಂತೆ ಈ ಭಾಗದ ರೈತರು ಜಿಲ್ಲಾಡಳಿತವನ್ನು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಭತ್ತದ ಕೊಯ್ಲು, ರಾಶಿ ಜೋರು; ದರ ನೋಡಿದ್ರೆ ಮನಸ್ಸು ಚೂರು! ರೈತರ ಗೋಳು ಕೇಳೋರಾರು?