ನವದೆಹಲಿ:ಮಣಿಪುರದಲ್ಲಿ ಮತ್ತೆ ಸಂಘರ್ಷ ಭುಗಿಲೆದ್ದಿದೆ. ಪರಿಸ್ಥಿತಿ ನಿಯಂತ್ರಿಸಲು ಕೇಂದ್ರ ಸರ್ಕಾರ 2,000 ಸಿಬ್ಬಂದಿ ಹೊಂದಿರುವ ಹೆಚ್ಚುವರಿ 20 ಸಿಎಪಿಎಫ್ ತಂಡಗಳನ್ನು ರವಾನಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಣಿಪುರದಲ್ಲಿ ಸೋಮವಾರ ಕೇಂದ್ರ ಮೀಸಲು ಪೊಲೀಸ್ ಪಡೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 10 ಶಂಕಿತ ಉಗ್ರರು ಸಾವನ್ನಪ್ಪಿದ್ದಾರೆ. ಶಸ್ತ್ರಸಜ್ಜಿತ ಬಂಡುಕೋರರು ಬೊರೊಬೆಕ್ರಾ ಪೊಲೀಸ್ ಠಾಣೆ ಮತ್ತು ಪಕ್ಕದ ಜಿರೀಬಾಮ್ ಜಿಲ್ಲೆಯ ಜಕುರಾಧೋ ಮೈತೇಯಿ ಸಮುದಾಯಕ್ಕೆ ಸೇರಿದ ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚುತ್ತಿದ್ದರು. ಇದನ್ನು ತಡೆಯಲು ಬಂದ ಸಿಆರ್‌ಪಿಎಫ್ ಯೋಧರ ಮೇಲೆ ಗುಂಡಿನ ದಾಳಿಗೆ ಮುಂದಾಗಿದ್ದರು. ಸಿಆರ್‌ಪಿಎಫ್ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಈ ಸಂಘರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಮಣಿಪುರಕ್ಕೆ ನಿಯೋಜನೆಗೊಂಡಿರುವ ಹೊಸ 20 ಕೇಂದ್ರ ಶಸಾಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಯಲ್ಲಿ 15 ಸಿಆರ್‌ಪಿಎಫ್ ತಂಡಗಳಿದ್ದು, ಐದು ಗಡಿ ಭದ್ರತಾ ಪಡೆ (ಬಿಎಸ್ಎಫ್)ಗಳಿವೆ.