ನವದೆಹಲಿ:ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಪಕ್ಷಗಳು ಬೇಡಿಕೆ ಇಟ್ಟಿರುವ ಹಳೆಯ ಪಿಂಚಣಿ ಮತ್ತು ಹೊಸ ಪಿಂಚಣಿ ಬದಲಾಗಿ ಏಕೀಕೃತ ಪಿಂಚಣಿ ಯೋಜನೆ ಜಾರಿ ಮಾಡಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಅನುಮೋದನೆ ಪಡೆಯಲಾಗಿದೆ.
ಸರ್ಕಾರಿ ನೌಕರರಿಗೆ ಮೂರು ಬಗೆಯ ಪಿಂಚಣಿ ಲಾಭಗಳನ್ನು ಇದು ಒದಗಿಸಲಿದೆ. ಏಕೀಕೃತ ಪಿಂಚಣಿ ಯೋಜನೆಯು 2025 ರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಜಾರಿ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮೂರು ಹಂತದ ಪಿಂಚಣಿ ಖಚಿತ:ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಸರ್ಕಾರ ನೌಕರರಿಗೆ ಖಚಿತ ಪಿಂಚಣಿ ಒದಗಿಸುವ ಯುಪಿಎಸ್ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರ ಮೊದಲ ಕ್ರಮವೆಂದರೆ, ಶೇಕಡಾ 50 ರಷ್ಟು ಪಿಂಚಣಿ ನೀಡುವುದಾಗಿದೆ. ಅಂದರೆ, ನೌಕರನು ತಾನು 25 ವರ್ಷ ಕೆಲಸದ ಬಳಿಕ ನಿವೃತ್ತಿಯಾದಲ್ಲಿ ಆತನಿಗೆ ತನ್ನ ಕೊನೆಯ 12 ತಿಂಗಳ ಅವಧಿಯಲ್ಲಿ ಪಡೆದ ಸಂಬಳದ ಅರ್ಧದಷ್ಟು ಹಣವನ್ನು ಪಿಂಚಣಿಯಾಗಿ ನೀಡಲಾಗುತ್ತದೆ ಎಂದರು.