ನವದೆಹಲಿ:2011 ರ ಬಳಿಕ ನೆನೆಗುದಿಗೆ ಬಿದ್ದಿರುವ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯು (ಎನ್ಪಿಆರ್) ಈ ವರ್ಷವೂ ನಡೆಯುವ ಅನುಮಾನವಿದೆ. ಇದಕ್ಕೆ ಕಾರಣ ಇಂದು ಮಂಡನೆಯಾದ ಬಜೆಟ್‌ನಲ್ಲಿ ಈ ಅಭಿಯಾನಕ್ಕಾಗಿ ಕೇವಲ 574.80 ಕೋಟಿ ರೂಪಾಯಿ ಮಾತ್ರ ಹಂಚಿಕೆ ಮಾಡಲಾಗಿದೆ.
2025 ರಲ್ಲಿ ಮಹತ್ವದ ಜನಗಣತಿ ನಡೆಯುವ ನಿರೀಕ್ಷೆ ಇತ್ತು. ಕೇಂದ್ರ ಸರ್ಕಾರವೂ ಇದರ ಸೂಚನೆ ನೀಡಿತ್ತು. ಆದರೆ, ಬಜೆಟ್‌ನಲ್ಲಿ ಇಟ್ಟಿರುವ ಅನುದಾನ ಗಮನಿಸಿದರೆ, ಈ ವರ್ಷವೂ ಅಭಿಯಾನ ನಡೆಯುವ ಸಾಧ್ಯತೆ ಕಡಿಮೆ ಇದೆ.
ಜನಗಣತಿ ಮತ್ತು ಎನ್ಪಿಆರ್ ನಡೆಸಲು 2020 ರ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರವರೆಗೆ ದೇಶಾದ್ಯಂತ ನಡೆಸಲು ನಡೆಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಡಿಸೆಂಬರ್ 24, 2019 ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯೂ ಸಿಕ್ಕಿತ್ತು. 2021 ರ ಜನಗಣತಿಗಾಗಿ 8,754.23 ಕೋಟಿ ರೂಪಾಯಿ, ರಾಷ್ಟ್ರೀಯ ಜನಸಂಖ್ಯಾ ನೋಂದಣಿಗಾಗಿ 3,941.35 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಆದರೆ, ಕೋವಿಡ್ ಕಾರಣಕ್ಕಾಗಿ ಎಲ್ಲವನ್ನೂ ರದ್ದು ಮಾಡಲಾಗಿತ್ತು.
ಜನಗಣತಿಗಾಗಿ ಎಷ್ಟು ಖರ್ಚಾಗುತ್ತೆ?ಅಧಿಕಾರಿಗಳ ಮಾಹಿತಿಯ ಪ್ರಕಾರ, ಸಂಪೂರ್ಣ ಜನಗಣತಿ ಮತ್ತು ಎನ್ಪಿಆರ್ ಅಭಿಯಾನಕ್ಕಾಗಿ 12 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ವೆಚ್ಚವಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ 2025-26ರ ಬಜೆಟ್‌ನಲ್ಲಿ ಇದಕ್ಕಾಗಿ ಕೇವಲ 574.80 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದಾರೆ. 2024-25ರಲ್ಲೂ 572 ಕೋಟಿ ರೂಪಾಯಿ ಮೀಸಲಿಡಲಾಗಿತ್ತು.
ಡಿಜಿಟಲ್ ಜನಗಣತಿ :ಈ ಬಾರಿ ನಡೆಯುವ ಜನಗಣತಿ ಡಿಜಿಟಲ್ ಮಾದರಿಯಲ್ಲಿ ನಡೆಯಲಿದೆ. ನಾಗರಿಕರೇ ಸ್ವಯಂ ತಮ್ಮ ಮಾಹಿತಿಯನ್ನು ತುಂಬಬೇಕಿದೆ. ಸರ್ಕಾರಿ ಎಣಿಕೆದಾರರ ಮೂಲಕ ಜನಗಣತಿ ಫಾರ್ಮ್ ಅನ್ನು ಭರ್ತಿ ಮಾಡುವ ಮೊದಲು ಜನರು ಎನ್ಪಿಆರ್ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಇದಕ್ಕಾಗಿ ಜನಗಣತಿ ಪ್ರಾಧಿಕಾರವು ಸ್ವಯಂ ಗಣತಿ ಪೋರ್ಟಲ್ ಅನ್ನು ವಿನ್ಯಾಸಗೊಳಿಸಿದೆ.