ನವದೆಹಲಿ:ಜಮ್ಮು ಕಾಶ್ಮೀರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿತು.
ಜಮ್ಮು ಕಾಶ್ಮೀರಕ್ಕೆ 3 ಹಂತಗಳಲ್ಲಿ ಮತದಾನ: ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್, "ಜಮ್ಮು ಕಾಶ್ಮೀರದ ವಿಧಾನಸಭೆ ಚುನಾವಣೆ ಸೆ.18, ಸೆ.25 ಹಾಗೂ ಅಕ್ಟೋಬರ್ 1ರಂದು ಒಟ್ಟು ಮೂರು ಹಂತದಲ್ಲಿ ನಡೆಯಲಿದೆ. ಹರಿಯಾಣದ ವಿಧಾನಸಭೆ ಚುನಾವಣೆ ಅ.1ರಂದು ನಡೆಯಲಿದೆ. ಎರಡೂ ರಾಜ್ಯಗಳ ಮತ ಎಣಿಕೆ ಅ.4ರಂದು ಜರುಗಲಿದೆ" ಎಂದು ತಿಳಿಸಿದರು.
"ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಯ ಪರಿಸ್ಥಿತಿಯನ್ನು ನಾವು ಪರಿಶೀಲಿಸಿದ್ದೇವೆ. ಅವರೆಲ್ಲರೂ ಸಾಧ್ಯವಾದಷ್ಟು ಬೇಗ ಚುನಾವಣೆ ನಡೆಯಲು ಮತ್ತು ಮತದಾನದಲ್ಲಿ ಭಾಗವಹಿಸಲು ಬಯಸಿದ್ದಾರೆ. ಹಾಗಾಗಿ, ಇದು ಬುಲೆಟ್ ವಿರುದ್ಧದ ಬ್ಯಾಲೆಟ್‌ನ ವಿಜಯವಾಗಿದೆ. ಕಾಶ್ಮೀರ ಕಣಿವೆ ಹಿಂಸೆಯನ್ನು ತಿರಸ್ಕರಿಸಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಲಿದ್ದು, ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ" ಎಂದು ಹೇಳಿದರು.
"ಚುನಾವಣಾ ಪ್ರಚಾರ ಕಾರ್ಯ ಭಯವಿಲ್ಲದೆ ನಡೆಯಬೇಕು. ಈ ಬಾರಿ ಯುವಕರನ್ನು ಚುನಾವಣೆಯ ರಾಯಭಾರಿಗಳನ್ನಾಗಿ ಮಾಡಲು ಬಯಸುತ್ತೇವೆ. ಆಗಸ್ಟ್ 19ರಂದು ಅಮರನಾಥ ಯಾತ್ರೆ ಮುಕ್ತಾಯಗೊಳ್ಳಲಿದ್ದು, ಆಗಸ್ಟ್ 20ರಂದು ಮತದಾರರ ಪಟ್ಟಿ ಪ್ರಕಟಿಸಲಾಗುವುದು" ಎಂದರು.