ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ 2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳನ್ನು ದೋಷಿ ಎಂದು ಲಖನೌದ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. ಈ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿತ್ತು.
2002ರ ವಿಧಾನಸಭೆ ಚುನಾವಣೆಯಲ್ಲಿ ಪ್ರಯಾಗರಾಜ್ ಪಶ್ಚಿಮ ಕ್ಷೇತ್ರದಿಂದ ಗ್ಯಾಂಗಸ್ಟರ್ - ರಾಜಕಾರಣಿ ಅತೀಕ್ ಅಹ್ಮದ್ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ರಾಜು ಪಾಲ್ ಸೋತಿದ್ದರು. ಆದರೆ, ನಂತರ ಲೋಕಸಭೆ ಚುನಾವಣೆಯಲ್ಲಿ ಅತೀಕ್ ಅಹ್ಮದ್ ಗೆದ್ದಿದ್ದರು. ಹೀಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಪ್ರಯಾಗರಾಜ್ ಪಶ್ಚಿಮ ವಿಧಾನಸಭೆ ಕ್ಷೇತ್ರ ತೆರವಾಗಿತ್ತು.
2004ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಎಸ್‌ಪಿಯಿಂದ ರಾಜು ಪಾಲ್ ಗೆಲುವು ಸಾಧಿಸಿದ್ದರು. ಈ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅತೀಕ್ ಅಹ್ಮದ್ ಸಹೋದರ ಅಶ್ರಫ್ ಸೋಲು ಕಂಡಿದ್ದರು. ಇದೇ ಕಾರಣದಿಂದ ಉಂಟಾದ ರಾಜಕೀಯ ದ್ವೇಷದಿಂದ 2005ರ ಜನವರಿ 25ರಂದು ಶಾಸಕ ರಾಜು ಪಾಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. 2016ರಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿತ್ತು.
ಈ ಪ್ರಕರಣದಲ್ಲಿ ಅತೀಕ್ ಅಹ್ಮದ್, ಸಹೋದರ ಖಾಲಿದ್ ಅಜೀಮ್ ಅಲಿಯಾಸ್ ಅಶ್ರಫ್ ಮತ್ತು ಗುಲ್ಬುಲ್ ಅಲಿಯಾಸ್ ರಫೀಕ್ ಸೇರಿ ಇತರರು ಆರೋಪಿಗಳಾಗಿದ್ದರು. ಈಗಾಗಲೇ ಮೂವರು ಸಹ ಮೃತಪಟ್ಟಿದ್ದು, ಇವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲಾಗಿದೆ. ಇದೀಗ ಕ್ರಿಮಿನಲ್ ಪಿತೂರಿ ಮತ್ತು ಕೊಲೆ ಪ್ರಕರಣದಲ್ಲಿ ರಂಜೀತ್ ಪಾಲ್, ಅಬಿದ್, ಫರ್ಹಾನ್ ಅಹ್ಮದ್, ಇಸ್ರಾರ್ ಅಹ್ಮದ್, ಜಾವೇದ್, ಗುಲ್ಹಾಸನ್ ಮತ್ತು ಅಬ್ದುಲ್ ಕವಿ ಎಂಬುವರನ್ನು ಅಪರಾಧಿಗಳೆಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಇದೇ ವೇಳೆ, ಆರೋಪಿ ಫರ್ಹಾನ್ ಅಹ್ಮದ್ನನ್ನು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲೂ ತಪ್ಪಿತಸ್ಥ ಎಂದು ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಲಯದ ಈ ತೀರ್ಪನ್ನು ರಾಜು ಪಾಲ್ ಪತ್ನಿ ಪೂಜಾ ಪಾಲ್ ಸ್ವಾಗತಿಸಿದ್ದು, ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ನ್ಯಾಯಾಲಯದ ತೀರ್ಪಿನಿಂದ ನಾನು ತೃಪ್ತಳಾಗಿದ್ದೇನೆ. ಆದರೆ, ಈ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕಾಗಿತ್ತು. ಏಕೆಂದರೆ ಒಬ್ಬ ಶಾಸಕನನ್ನು ಹಾಡಹಗಲೇ ಕೊಲೆ ಮಾಡಲಾಗಿತ್ತು. ನನ್ನ ಪತಿಯೊಂದಿಗೆ ಇನ್ನಿಬ್ಬರು ಸಹ ಕೊಲೆಯಾಗಿದ್ದಾರೆ. ಈ ಅಪರಾಧವು ಎಷ್ಟು ಘೋರವಾಗಿದೆ ಎಂದರೆ, ತಪ್ಪಿತಸ್ಥರಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆ ಎಂದು ಪೂಜಾ ಪಾಲ್ ಹೇಳಿದ್ದಾರೆ.
ರಾಜು ಪಾಲ್ ಹತ್ಯೆ ಪ್ರಕರಣದ ಪ್ರತ್ಯಕ್ಷದರ್ಶಿ ಮತ್ತು ಪ್ರಮುಖ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಕೂಡ ಅತೀಕ್ ಅಹ್ಮದ್ ಗ್ಯಾಂಗ್ 2006ರ ಫೆಬ್ರವರಿ 28ರಂದು ಕೊಲೆ ಮಾಡಲಾಗಿತ್ತು. ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ತನಗೆ ತೊಂದರೆಯಾಗಬಹುದು ಎಂದು ಅರಿತಿದ್ದ ಅತೀಕ್ , ಉಮೇಶ್ ಪಾಲ್ ಅವರೊಂದಿಗೆ ಅನೇಕ ಬಾರಿ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದ್ದ. ಈ ಪ್ರಕರಣದಿಂದ ಹಿಂದೆ ಸರಿಯುವಂತೆಯೂ ಬೆದರಿಕೆ ಒಡ್ಡವಾಗಿತ್ತು. ಕೊನೆಗೆ ಉಮೇಶ್ ಪಾಲ್ನನ್ನು ಅಪಹರಿಸಿ ಹತ್ಯೆ ಮಾಡಲಾಗಿತ್ತು. ಸುಮಾರು 101 ಪ್ರಕರಣಗಳನ್ನು ಎದುರಿಸುತ್ತಿದ್ದ ಅತೀಕ್ ಅಹ್ಮದ್ಗೆ ಇದೇ ಪ್ರಕರಣ ಕಂಟಕವಾಗಿ ಪರಿಣಮಿಸಿತ್ತು. ಅಲ್ಲದೇ, ಉಮೇಶ್ ಪಾಲ್ ಪ್ರಕರಣದಲ್ಲಿ ಮೊದಲ ಬಾರಿಗೆ ಅತೀಕ್ ಶಿಕ್ಷೆಗೆ ಗುರಿಯಾಗಿದ್ದ ಎಂಬುವುದು ಗಮನಾರ್ಹ.
ಇದನ್ನೂ ಓದಿ:ಹೃದಯಾಘಾತದಿಂದ ಮಾಫಿಯಾ ಡಾನ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು