ನವದೆಹಲಿ:ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆ ಚುರುಕುಗೊಳಿಸಿರುವ ಕೇಂದ್ರೀಯ ತನಿಖಾ ದಳ(ಸಿಬಿಐ) ಬಿಹಾರದಲ್ಲಿ ಗುರುವಾರ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಮನೀಶ್ ಪ್ರಕಾಶ್ ಮತ್ತು ಅಶುತೋಷ್ ಬಂಧಿತರು. ಇವರು ಪಾಟ್ನಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.
ಆರೋಪಿ ಅಶುತೋಷ್ ವಿದ್ಯಾರ್ಥಿಗಳಿಗೆ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಅಭ್ಯಾಸ ನಡೆಸಲು ಸುರಕ್ಷಿತ ಸ್ಥಳದ ವ್ಯವಸ್ಥೆ ಮಾಡಿದ್ದ. ಮತ್ತೋರ್ವ ಆರೋಪಿ ಮನೀಶ್, ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಾನೇ ಕರೆದೊಯ್ದು ಬಿಟ್ಟುಬಂದಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಮನೀಶ್ ಪ್ರಕಾಶ್ ತಮ್ಮ ಕಾರಿನಲ್ಲಿಯೇ ವಿದ್ಯಾರ್ಥಿಗಳನ್ನು ಸಾಗಿಸಿದ್ದಾನೆ. ಅಶುತೋಷ್ ಮನೆಯಲ್ಲಿ ಅಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿಗಳು ಉಳಿದುಕೊಂಡಿದ್ದರು ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೂರು ರಾಜ್ಯಗಳಲ್ಲಿ ನೀಟ್ ಅಕ್ರಮ:ಬಿಹಾರ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಪೇಪರ್ ಸೋರಿಕೆಯಾಗಿರುವುದನ್ನು ಸಿಬಿಐ ಪತ್ತೆ ಮಾಡಿದೆ. ಬಿಹಾರದ ಪಾಟ್ನಾ, ಗುಜರಾತ್ನ ಗೋಧ್ರಾ ಹಾಗು ರಾಜಸ್ಥಾನದಲ್ಲಿ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಈಚೆಗೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ(NEET-UG) ಪರೀಕ್ಷೆಯಲ್ಲಿ ಟಾಪರ್‌ಗಳಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳೂ ಸೇರಿ ಹಲವರು ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪರೀಕ್ಷೆ ನಡೆಸಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ಮುಖ್ಯಸ್ಥನನ್ನು ಕೇಂದ್ರ ಸರ್ಕಾರ ಹುದ್ದೆಯಿಂದ ತೆಗೆದುಹಾಕಿದೆ. ಸೋರಿಕೆ ವಿಷಯ ಹೊರಬಿದ್ದ ಬಳಿಕ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಮರು ಪರೀಕ್ಷೆ ನಡೆಸಬೇಕೆಂಬ ಒತ್ತಾಯ ಜೋರಾಗಿದೆ.
ಒಎಂಆರ್ ಶೀಟ್ನಲ್ಲಿ ಎನ್ಟಿಎ ನೀಡಿದ ಅಸಮಂಜಸ ಲೆಕ್ಕಾಚಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಪಡೆದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸೂಚಿಸಿದೆ. ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎಸ್.ವಿ.ಎನ್.ಭಟ್ಟಿ ಅವರಿದ್ದ ಪೀಠವು ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯ ದಿನಾಂಕವಾದ ಜುಲೈ 8ರೊಳಗೆ ಉತ್ತರ ನೀಡುವಂತೆ ಎನ್‌ಟಿಎಗೆ ತಾಕೀತು ಮಾಡಿದೆ.
ಜೊತೆಗೆ, ಮೇ 5ರಂದು ನಡೆದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. NEET-UG 2024 ಫಲಿತಾಂಶಗಳನ್ನು ರದ್ದು ಮಾಡಿ ಮರು ಪರೀಕ್ಷೆಯನ್ನು ನಡೆಸಲು ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಮಧ್ಯೆ, NEET-UG ಕೌನ್ಸೆಲಿಂಗ್‌ಗೆ ತಡೆ ನೀಡಲು ಕೋರ್ಟ್ ನಿರಾಕರಿಸಿತ್ತು.
ಇದನ್ನೂ ಓದಿ:ನೀಟ್ ಅಕ್ರಮ: ಪಾಟ್ನಾ ತಲುಪಿದ ಸಿಬಿಐ ತಂಡ, ತನಿಖೆ ಪ್ರಾರಂಭ - NEET Paper Leak Case