ಕರ್ನಾಟಕ

karnataka

ತೆಲಂಗಾಣ: ಮರಕ್ಕೆ ಡಿಕ್ಕಿ ಹೊಡೆದ ಕಾರು, ಬಳ್ಳಾರಿಯ 5 ಮಂದಿ ಸಾವು

By ETV Bharat Karnataka Team

Published : Mar 4, 2024, 10:19 AM IST

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಮೂವರು ಮಕ್ಕಳು ಸೇರಿ ಐವರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ವನಪರ್ತಿಯಲ್ಲಿ ಇಂದು (ಸೋಮವಾರ) ಬೆಳಗ್ಗೆ ನಡೆದಿದೆ.

ರಸ್ತೆ ಅಪಘಾತ  ತೆಲಂಗಾಣ  Road Accident  ಬಳ್ಳಾರಿ  Bellary
ತೆಲಂಗಾಣ: ಕಾರು ಮರಕ್ಕೆ ಡಿಕ್ಕಿ ಹೊಡೆದು ಮೂವರು ಮಕ್ಕಳು ಸೇರಿ ಐವರು ಸಾವು

ವನಪರ್ತಿ(ತೆಲಂಗಾಣ):ಇಲ್ಲಿನವನಪರ್ತಿಯಲ್ಲಿ ಸೋಮವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೊತಕೋಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ನಿಯಂತ್ರಣ ಕಳೆದುಕೊಂಡು ಮರಕ್ಕೆ ಗುದ್ದಿದೆ. ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಹಲವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಕಾರು ಹೈದರಾಬಾದ್‌ನಿಂದ ಕರ್ನಾಟಕದ ಬಳ್ಳಾರಿಗೆ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿದೆ. ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ.

ಅಬ್ದುಲ್ ರಹಮಾನ್ (62), ಸಲೀಮಾ ಜಿ (85), ಮಕ್ಕಳಾದ ವಾಸಿರ್ ರಾವುತ್ (7 ತಿಂಗಳು), ಬುಸ್ರಾ (2 ವರ್ಷ) ಮತ್ತು ಮರಿಯಾ (5 ವರ್ಷ) ಸಾವನ್ನಪ್ಪಿದ್ದಾರೆ. ಇನ್ನು, ಸಮೀರ (5), ಹುಸೇನ್ (10), ಶಫಿ, ಖಾದಿರುನ್ನೀಸಾ, ಹಬೀಬ್, ಅಲಿ, ಶಹಜಾನ್ ಬೇಗ್ ಗಾಯಗೊಂಡಿದ್ದು ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಪೈಕಿ ಅಲಿ ಎಂಬವರು ವನಪರ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರನ್ನು ಉತ್ತಮ ಚಿಕಿತ್ಸೆಗಾಗಿ ಕರ್ನೂಲ್‌ಗೆ ರವಾನಿಸಲಾಗಿದೆ.

ಅಪಘಾತದ ವೇಳೆ ಕಾರಿನಲ್ಲಿ 12 ಮಂದಿ ಪ್ರಯಾಣಿಸುತ್ತಿದ್ದರು. ಬೆಳಗಿನ ಜಾವ ಎರಡೂವರೆಯಿಂದ ಮೂರು ಗಂಟೆಯ ನಡುವೆ ಅಪಘಾತ ಘಟಿಸಿದೆ. ಚಾಲಕ ನಿದ್ರೆಯ ಮಂಪರಿನಲ್ಲಿ ಕಾರು ಚಲಾಯಿಸಿದ್ದರಿಂದ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತರು ಬಳ್ಳಾರಿಯವರು: ಅತಿವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆದ ಕಾರಣ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ವಾಹನದಿಂದ ಮಕ್ಕಳ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹಾಗೂ ಎಲ್ ಆ್ಯಂಡ್ ಟಿ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಶ್ರಮಿಸಬೇಕಾಯಿತು. ಮೃತರು ಮತ್ತು ಗಾಯಗೊಂಡವರು ಕರ್ನಾಟಕದ ಬಳ್ಳಾರಿ ಜಿಲ್ಲೆಯವರು. ಮದುವೆ ಪ್ರಸ್ತಾಪಕ್ಕಾಗಿ ಹೈದರಾಬಾದ್‌ಗೆ ಬಂದಿದ್ದರು. ಬಳ್ಳಾರಿಗೆ ವಾಪಸಾಗುತ್ತಿದ್ದಾಗ ವನಪರ್ತಿಯಲ್ಲಿ ಅವಘಡ ಸಂಭವಿಸಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಪಟಾಕಿ ತಯಾರಿಕೆ ವೇಳೆ ಸ್ಫೋಟ: ಪತಿ ಸಾವು, ಪತ್ನಿಗೆ ಗಂಭೀರ ಗಾಯ

ABOUT THE AUTHOR

...view details