ನವದೆಹಲಿ: ನ್ಯಾಯಾಲಯದ ಕಲಾಪದ ವೇಳೆ ಮಹಿಳಾ ವಕೀಲರ ಬಗ್ಗೆ ಹಾಗೂ ಸಮುದಾಯವೊಂದು ನೆಲೆಸಿರುವ ಪ್ರದೇಶವನ್ನು ಪಾಕಿಸ್ತಾನ ಎಂಬುದಾಗಿ ಹೇಳಿಕೆ ನೀಡಿದ್ದ ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿರುವ ಬೆನ್ನಲ್ಲೇ ಈ ಪ್ರಕರಣದ ಸ್ವಯಂ ಪ್ರೇರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಕ್ತಾಯಗೊಳಿಸಿದೆ.
ಇತ್ತೀಚೆಗೆ ಭೂಮಾಲೀಕ-ಹಿಡುವಳಿದಾರರ ವಿವಾದ ಪ್ರಕರಣವೊಂದರ ಕುರಿತು ವಿಚಾರಣೆ ವೇಳೆ ನ್ಯಾಯಮೂರ್ತಿ ಶ್ರೀಶಾನಂದ ಅವರು ಬೆಂಗಳೂರಿನಲ್ಲಿ ಒಂದು ಕೋಮಿನ ಬಾಹುಳ್ಯವಿರುವ ಪ್ರದೇಶವನ್ನು 'ಪಾಕಿಸ್ತಾನ' ಎಂಬುದಾಗಿ ಹಾಗೂ ಮಹಿಳಾ ವಕೀಲರೊಬ್ಬರ ಕುರಿತಂತೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗಳ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.
ವಿಷಯ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಗಮನ ಹರಿಸುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಒತ್ತಾಯಿಸಿದ್ದರು. ಹೇಳಿಕೆ ಕುರಿತ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸಿದ ಸುಪ್ರೀಂ ಕೋರ್ಟ್, ಈ ಸಂಬಂಧ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ಗೆ ಸೂಚಿಸಿತ್ತು. ಇದಾದ ಮರುದಿನವೇ ಸೆಪ್ಟಂಬರ್ 21ರಂದು ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ತೆರೆದ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ, ಕ್ಷಮೆಯಾಚಿಸಿದ್ದರು.