ನವದೆಹಲಿ: ದೇಶದಲ್ಲಿ ಹಾಲು ಮತ್ತು ಡೈರಿ ಉತ್ಪಾದನೆ ಹೆಚ್ಚಿಸುವ ಯೋಜನೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಪ್ರಕಟಿಸಿದ್ದಾರೆ. ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದೆ. ಆದರೆ, ದೇಶದಲ್ಲಿ ಕಡಿಮೆ ಉತ್ಪಾದಕತೆ ಇದೆ ಎಂದು ಹಣಕಾಸು ಸಚಿವರು ಹೇಳಿದರು. ಎಣ್ಣೆ ಕಾಳುಗಳ ಉತ್ಪಾದನೆಯಲ್ಲಿ ಆತ್ಮನಿರ್ಭರಕ್ಕಾಗಿ ಕಾರ್ಯತಂತ್ರ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು. ಕೃಷಿ ಕ್ಷೇತ್ರದಲ್ಲಿ ಮೌಲ್ಯವರ್ಧನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮುಂದುವರಿಸಲಾಗುವುದು ಎಂದು ಸಚಿವರು ಹೇಳಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ನಲ್ಲಿ ರಸಗೊಬ್ಬರ ಸಬ್ಸಿಡಿಯ ಅನುದಾನವನ್ನು 2024-25ನೇ ಸಾಲಿಗೆ ಶೇಕಡಾ 13 ರಷ್ಟು ಕಡಿಮೆ ಮಾಡಿ 1.64 ಲಕ್ಷ ಕೋಟಿ ರೂ.ಗೆ ಇಳಿಸಿದ್ದಾರೆ. 2024ರ ಹಣಕಾಸು ವರ್ಷದಲ್ಲಿ ರಸಗೊಬ್ಬರ ಸಬ್ಸಿಡಿಗೆ 1.75 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ.
ಪ್ರಧಾನಿ ಕಿಸಾನ್ ಸಂಪದ (ಕೃಷಿ - ಸಾಗರ ಸಂಸ್ಕರಣೆ ಮತ್ತು ಕೃಷಿ ಸಂಸ್ಕರಣಾ ಕ್ಲಸ್ಟರ್ ಗಳ ಅಭಿವೃದ್ಧಿ ಯೋಜನೆ) ಯೋಜನೆಯು 38 ಲಕ್ಷ ರೈತರಿಗೆ ಪ್ರಯೋಜನ ನೀಡಿದೆ ಮತ್ತು 2.4 ಲಕ್ಷ ಸ್ವಸಹಾಯ ಗುಂಪುಗಳಿಗೆ (ಎಸ್ಎಚ್ಜಿ) ಸಹಾಯ ಮಾಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ತಮ್ಮ ಮಧ್ಯಂತರ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಈ ಯೋಜನೆಯು ರೈತರಿಂದ ಚಿಲ್ಲರೆ ಮಳಿಗೆಗಳಿಗೆ ಕೃಷಿ ಸರಕುಗಳ ವರ್ಗಾವಣೆಯನ್ನು ಸುಲಭಗೊಳಿಸಲು ಆಧುನಿಕ ಮೂಲಸೌಕರ್ಯ ಮತ್ತು ಪೂರೈಕೆ ಸರಪಳಿ ನಿರ್ವಹಣೆ ನೆರವಿಗೆ ಬರಲಿದೆ ಎಂದಿದ್ದಾರೆ.