ಹೈದರಾಬಾದ್:ಲಗಚೆರ್ಲಾ ಘಟನೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಲು ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್ ) ಶಾಸಕರು ಮಂಗಳವಾರ ತೆಲಂಗಾಣ ವಿಧಾನಸಭೆಗೆ ಕಪ್ಪು ಶರ್ಟ್ ಮತ್ತು ಕೈಕೋಳ ಧರಿಸಿ ಆಗಮಿಸಿದರು. ಸಂಗಾರೆಡ್ಡಿ ಜೈಲಿನಿಂದ ರೈತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆತನಿಗೆ ಕೈಕೋಳ ತೊಡಿಸಿದ್ದನ್ನು ವಿರೋಧಿಸಿ ಬಿಆರ್ಎಸ್ ಶಾಸಕರು ಸತತ ಎರಡನೇ ದಿನವೂ ಪ್ರತಿಭಟನೆ ನಡೆಸಿದರು.
ಕೈಕೋಳ ಮತ್ತು ಕಪ್ಪು ಶರ್ಟ್ ಧರಿಸಿದ ಬಿಆರ್ಎಸ್ ಶಾಸಕರು 'ರೈತರಿಗೆ ಕೈಕೋಳ ತೊಡಿಸಿದ ಸರ್ಕಾರಕ್ಕೆ ನಾಚಿಕೆಯಾಗಬೇಕು.. ಶೇಮ್ ಶೇಮ್' ಎಂಬ ಘೋಷಣೆಗಳನ್ನು ಕೂಗುತ್ತಾ ಬಿಆರ್ಎಸ್ ಶಾಸಕರು ವಿಧಾನಸಭೆಗೆ ಪ್ರವೇಶಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್, ಹಿರಿಯ ಮುಖಂಡ ಟಿ. ಹರೀಶ್ ರಾವ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಬಂಧಿತ ಎಲ್ಲ ರೈತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮುಖಂಡರು ಒತ್ತಾಯಿಸಿದರು.
ರೈತರಿಗೆ ನ್ಯಾಯ ಒದಗಿಸುವಂತೆ ಘೋಷಣೆ:ಅಲ್ಲದೇ ಬಿಆರ್ಎಸ್ ಎಂಎಲ್ಸಿಗಳು ಕೂಡ ಕಪ್ಪು ಶರ್ಟ್ ಧರಿಸಿಯೇ ವಿಧಾನ ಪರಿಷತ್ ಕಲಾಪಗಳಿಗೆ ಹಾಜರಾದರು. ಕವಿತಾ ನೇತೃತ್ವದಲ್ಲಿ ವಿಧಾನ ಪರಿಷತ್ ತಲುಪಿದ ಎಂಎಲ್ಸಿಗಳು ಘೋಷಣೆಗಳನ್ನು ಕೂಗುತ್ತಾ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ರೈತರನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಅವರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.