ಕೊಯಮತ್ತೂರು(ತಮಿಳುನಾಡು):ಇತ್ತೀಚಿಗೆಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕನ್ಸೇರಿಯಲ್ಲಿರುವ ಖಾಸಗಿ ಮದುವೆ ಮಂಟಪದಲ್ಲಿ ಮುಸ್ಲಿಂ ಸಮುದಾಯದ ವಿವಾಹ ಸಮಾರಂಭ ಆಯೋಜಿಸಲಾಗಿತ್ತು. ಇಲ್ಲಿ ತಮಿಳುನಾಡಿನ ಕೊಯಮತ್ತೂರಿನ ತೃತೀಯಲಿಂಗಿ ಕನಿಕಾ ಎಂಬವರು ತಮ್ಮ ತಂಡದೊಂದಿಗೆ ಕುರ್ತಾ, ಲುಂಗಿ ಧರಿಸಿ ಉತ್ಸಾಹದಿಂದ ರುಚಿಕಟ್ಟಾದ ಬಿರಿಯಾನಿ ಸಿದ್ಧಪಡಿಸಿ ಅತಿಥಿಗಳಿಗೆ ಉಣಬಡಿಸಿದ್ದಾರೆ.
ಈ ಸಂದರ್ಭದಲ್ಲಿ 'ಈಟಿವಿ ಭಾರತ್' ಪ್ರತಿನಿಧಿಯೊಂದಿಗೆ ಮಾತನಾಡಿದ ಕನಿಕಾ, "ಶ್ರೀಮತಿ ಸೆಲ್ವಿ ಮತ್ತು ಸಾರೋ ಅಮ್ಮನವರಿಂದ ಅಡುಗೆ ಕಲಿತ ನಂತರ ನಾವು ಕೊಯಮತ್ತೂರಿನಲ್ಲಿ ಮಾತ್ರವಲ್ಲದೆ ಕೇರಳದಲ್ಲೂ ಬಿರಿಯಾನಿ ತಯಾರಿಸುತ್ತಿದ್ದೇವೆ. ನನ್ನಂತಹ ಟ್ರಾನ್ಸ್‌ಜೆಂಡರ್‌ಗಳಿಗೆ ಅಡುಗೆ ಕಲಿಸುವ ಮೂಲಕ ನಮ್ಮಲ್ಲಿ ಸೆಲ್ವಿ ಅಮ್ಮ ಆತ್ಮಸ್ಥೈರ್ಯ ತುಂಬಿದ್ದಾರೆ" ಎಂದರು.
"ನಾನು ಕಳೆದ 15 ವರ್ಷಗಳಿಂದ ಅಡುಗೆ ಮಾಡುತ್ತಿದ್ದೇನೆ. ನಮ್ಮ ರಾವುತರ್ ಬಿರಿಯಾನಿ ಕೊಯಮತ್ತೂರಿನಲ್ಲಿ ಜನಪ್ರಿಯ. ನಮಗೆ ಕೊಯಮತ್ತೂರಿಗಿಂತ ಕೇರಳದಲ್ಲಿ ಹೆಚ್ಚಿನ ಗ್ರಾಹಕರಿದ್ದಾರೆ. ಕಳೆದ ವಾರ ನಮ್ಮ 40 ಜನರ ತಂಡ ಹತ್ತು ಸಾವಿರ ಜನರಿಗೆ ಬಿರಿಯಾನಿ ತಯಾರಿಸಿತು. ಮೊದಲು ಮನೆಯಲ್ಲಿ ಚಹಾ ಮಾಡುವುದು ಹೇಗೆಂದೂ ತಿಳಿದಿರಲಿಲ್ಲ. ಆದರೆ ಈಗ ನಾವು 10,000 ಜನರಿಗೆ ಅಡುಗೆ ಮಾಡುವ ಸಾಮರ್ಥ್ಯ ಹೊಂದಿದ್ದೇವೆ" ಎಂದು ಹರ್ಷ ವ್ಯಕ್ತಪಡಿಸಿದರು.
"ಸಮಾಜದಲ್ಲಿ ಎಲ್ಲರಿಗೂ ಊಟ ಹಾಕುವ ಕಾರ್ಯದಲ್ಲಿರುವ ನಮ್ಮನ್ನು ಎಲ್ಲರೂ ಅಮ್ಮ ಎಂದು ಕರೆಯುತ್ತಾರೆ. ಅಡುಗೆ ಕಾಯಕದಿಂದ ನನಗೆ ವಿಶೇಷ ಗೌರವ ಬಂದಿದೆ. ಮನೆ ಹಾಗೂ ಸಮಾಜದಲ್ಲಿ ನಿರ್ಲಕ್ಷಕ್ಕೊಳಗಾಗಿರುವ ತೃತೀಯಲಿಂಗಿಗಳಿಗೆ ಉತ್ತಮ ದಿಶೆ ತೋರಿಸಲು ತಮ್ಮ ಗುಂಪು ಕೆಲಸ ಮಾಡುತ್ತದೆ" ಎಂದು ಕನಿಕಾ ಹೇಳಿದರು.
ಇದನ್ನೂ ಓದಿ:ಕಿ.ಮೀ. ದೂರ ಸಾಲಿನಲ್ಲಿ ಕಾದರೂ 'ರುಚಿಗೆ ಮೋಸ ಮಾಡದ' ಹೊಸಕೋಟೆಯ ದಮ್ ಬಿರಿಯಾನಿ..!