ಪಾಟ್ನಾ:ಬಿಹಾರದ ರಾಜಧಾನಿಯ ಗಾಂಧಿ ಮೈದಾನದಲ್ಲಿ ವಿದ್ಯಾರ್ಥಿ ಪ್ರತಿಭಟನೆಯನ್ನು ಬೆಂಬಲಿಸಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಜನ ಸುರಾಜ್ ಪಾರ್ಟಿಯ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರನ್ನು ಸೋಮವಾರ ಮುಂಜಾನೆ ಬಿಹಾರ ಪೊಲೀಸರು ಬಂಧಿಸಿದರು.
ಪ್ರಶಾಂತ್ ಕಿಶೋರ್ ಅವರನ್ನು ಪಾಟ್ನಾ ಪೊಲೀಸರು ಗಾಂಧಿ ಮೈದಾನದಿಂದ ಬಲವಂತವಾಗಿ ಬಂಧಿಸಿ ಕರೆದೊಯ್ದಿದ್ದಾರೆ. ಬಿಹಾರ ಲೋಕಸೇವಾ ಆಯೋಗ ನಡೆಸಿದ್ದ 70ನೇ ಸಂಯುಕ್ತ (ಪ್ರಿಲಿಮಿನರಿ) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಪ್ರಶಾಂತ್ ಕಿಶೋರ್ ಬೆಂಬಲಿಸಿ, ಜನವರಿ 2ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.
ಸೋಮವಾರ ಬೆಳಗ್ಗೆ 4 ಗಂಟೆಯ ಸುಮಾರಿಗೆ 10 ಪೊಲೀಸ್ ಸಿಬ್ಬಂದಿಯೊಂದಿಗೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಬಿಪಿಎಸ್‌ಸಿ ಅಭ್ಯರ್ಥಿಗಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಕಿಶೋರ್ ಅವರನ್ನು, ಬೆಂಬಲಿಗರ ಪ್ರತಿರೋಧದ ನಡುವೆಯೂ ಆಂಬುಲೆನ್ಸ್‌ನಲ್ಲಿ ಕರೆದೊಯ್ದರು.
ಬಿಪಿಎಸ್‌ಸಿ ಪ್ರತಿಭಟನೆ ತೀವ್ರ: ಪಾಟ್ನಾದಲ್ಲಿ ಮುಷ್ಕರದ ವೇಳೆ ಪ್ರಶಾಂತ್ ಕಿಶೋರ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಕಪಾಳಮೋಕ್ಷ ಮಾಡಿದ್ದಾರೆ ಎಂದು ಬೆಂಬಲಿಗರು ಆರೋಪಿಸಿದ್ದಾರೆ. "ಕಳೆದ 5 ದಿನಗಳಿಂದ ರಾಜ್ಯದ ಕೆಟ್ಟ ಶಿಕ್ಷಣ ವ್ಯವಸ್ಥೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಅವರನ್ನು ಪೊಲೀಸರು ಬೆಳಗ್ಗೆ 4 ಗಂಟೆಗೆ ಬಲವಂತವಾಗಿ ವಶಕ್ಕೆ ಪಡೆದರು. ಅವರೊಂದಿಗೆ ಕುಳಿತಿದ್ದ ಸಾವಿರಾರು ಯುವಕರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ" ಎಂದು ಜನ ಸುರಾಜ್ ಪಕ್ಷ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಆರೋಪಿಸಿದೆ.
"ಪ್ರಶಾಂತ್ ಕಿಶೋರ್ ಅವರು ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುತ್ತಿದ್ದರು. ಅವರ ಬಂಧನ ಸ್ವೀಕಾರಾರ್ಹವಲ್ಲ" ಎಂದು ಪ್ರತಿಭಟನಾಕಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.