ಕರ್ನಾಟಕ

karnataka

ಸೌದಿ ಅರೇಬಿಯಾದಲ್ಲಿ ಉತ್ತರ ಪ್ರದೇಶ ಕಾರ್ಮಿಕನ ಸಾವು: 71 ದಿನಗಳ ಬಳಿಕ ತವರಿಗೆ ಬಂದ ಪಾರ್ಥಿವ ಶರೀರ - UP Youth deadbody from Saudi

By ETV Bharat Karnataka Team

Published : Aug 28, 2024, 1:01 PM IST

ಜೂನ್​ 18ರಂದು ಹೃದಯಾಘಾತದಿಂದ ಸಾವನ್ನಪ್ಪಿದ ಉತ್ತರ ಪ್ರದೇಶದ ಕಾರ್ಮಿಕನ ಶವ 71 ದಿನಗಳ ಬಳಿಕ ತವರಿಗೆ ಆಗಮಿಸಿದೆ.

body-of-uttar-pradesh-youth-working-in-saudi-arabia-reaches-india-after-71-days
ಪಾರ್ಥಿವ ಶರೀರ ದರ್ಶನದಲ್ಲಿ ಗ್ರಾಮಸ್ಥರು (ಈಟಿವಿ ಭಾರತ್​​)

ಅಯೋಧ್ಯೆ, ಉತ್ತರಪ್ರದೇಶ: ಸೌದಿ ಅರೇಬಿಯಾದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಯುವಕನ ಮೃತದೇಹ 71 ದಿನಗಳ ಬಳಿಕ ಉತ್ತರ ಪ್ರದೇಶದ ಆತನ ತವರಿಗೆ ತರಲಾಗಿದೆ. ಮಧ್ಯ ಪ್ರಾಚ್ಯ ದೇಶದಲ್ಲಿ ಕೆಲಸ ಮಾಡುತ್ತಿದ್ದ ರಂಜಿತ್​ ಪ್ರಸಾದ್​ (26) ಹೃದಯಾಘಾತದಿಂದ ಸಾವನ್ನಪ್ಪಿದ ಯುವಕ. ರುಡೌಲಿ ಗ್ರಾಮದ ಬಿಛಲ ಗ್ರಾದ ನಿವಾಸಿ ನನ್ಕು ಪ್ರಸಾದ್​ ಮನೆಗೆ ಮೃತದೇಹ ತರುತ್ತಿದ್ದಂತೆ ಸಂಬಂಧಿಕರು ಸ್ನೇಹಿತರ ದುಃಖದ ಕಟ್ಟೆ ಒಡೆಯಿತು.

ಜೂನ್​ 18ರಂದು ರಂಜಿತ್​ ಪ್ರಸಾದ್​ ಶವ, ಸ್ನಾನದ ಮನೆಯಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದಾಗ ಸಾವಿಗೆ ಹೃದಯಾಘಾತ ಕಾರಣ ಎಂಬುದಾಗಿ ತಿಳಿದು ಬಂದಿತ್ತು. ಅಲ್ಲಿನ ಎಲ್ಲ ಕಾನೂನು ಕ್ರಮ ಪೂರೈಸಿ ಭಾರತಕ್ಕೆ ಮೃತದೇಹ ತರಲು ಅವರ ಕುಟುಂಬ ಸುಮಾರು 2 ತಿಂಗಳುಗಳ ಕಾಲ ಕಾಯಬೇಕಾಯಿತು.

ಮನೆಗೆ ರಂಜಿತ್​ ಮೃತದೇಹ ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಮತ್ತು ಸಂಬಂಧಿಕರ ಅಳಲು ಮುಗಿಲು ಮಟ್ಟಿತು. ಮನೆಯ ಸುತ್ತಮುತ್ತ ಆತನ ಸಾವಿಗೆ ಕಂಬನಿ ಮಿಡಿಯಲು ಜನಸ್ತೋಮವೇ ಹರಿದು ಬಂದಿತ್ತು. ಶಾಸಕ ರಾಮ್​ ಚಂದ್ರ ಯಾದವ್​ ಕೂಡ ಪಾರ್ಥಿವ ಶರೀರ ದರ್ಶನ ಪಡೆದು, ಸಾವಿಗೆ ಸಂತಾಪ ಸೂಚಿಸಿದರು.

ಮೃತದೇಹ ರವಾನೆಗೆ ಹರಸಾಹಸ: ರಂಜಿತ್​​ ಸಹೋದ್ಯೋಗಿಗಳು ಹೇಳುವಂತೆ ಜೂನ್​ 18ರಂದು ಆತ ಸ್ನಾನದ ಮನೆಗೆ ಹೋಗಿದ್ದರು. ಹೀಗೆ ಸ್ನಾನಕ್ಕೆಂದು ಹೋದ ಆತ ಎಷ್ಟೊತ್ತಾದರೂ ಬರಲಿಲ್ಲ. ಇದರಿಂದ ಗಾಬರಿಗೊಂಡ ಸಹೋದ್ಯೋಗಿಗಳು ಹೋಗಿ ಪರೀಕ್ಷೆ ಮಾಡಿದಾಗ, ಆತ ನೆಲದ ಮೇಲೆ ಬಿದ್ದಿದ್ದು ಕಂಡು ಬಂತು, ತಕ್ಷಣಕ್ಕೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಈ ಸುದ್ದಿಯನ್ನು ತಕ್ಷಣಕ್ಕೆ ಆತನ ಕುಟುಂಬಕ್ಕೆ ತಿಳಿಸಲಾಗಿತ್ತು. ಕುಟುಂಬಸ್ಥರು ಕೂಡ ಆಘಾತ ವ್ಯಕ್ತಪಡಿಸಿದ್ದರು. ಹಣ ಸಂಪಾದನೆಗಾಗಿ 2021ರಲ್ಲಿ ರಂಜಿತ್​ ತಂದೆ ನನ್ಕು ಪ್ರಸಾದ್​ ಜೊತೆಗೆ ಸೌದಿ ಅರೇಬಿಯಾಗೆ ತೆರಳಿದ್ದ. ಭಾರತಕ್ಕೆ ಬರಲು ಆತನಿಗೆ ರಜೆ ನೀಡಲಾಗಿದ್ದು, ಇನ್ನೇನು ಆತ ತವರಿಗೆ ಬರಬೇಕಿತ್ತು. ಆತನ ಬರುವಿಕೆಗೆಗಾಗಿ ನಾವು ಕಾದಿದ್ದೆವು. ಅಷ್ಟರಲ್ಲಿ ಈ ದುರ್ಘಟನೆ ನಡೆದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅಲ್ಲಿಂದ ಮೃತದೇಹವನ್ನು ತರಿಸಿಕೊಳ್ಳಲು ಹರಸಾಹಸವನ್ನು ಪಡಬೇಕಾಯಿತು. ಅದು ಸುಲಭದ ಕೆಲಸವಾಗಿರಲಿಲ್ಲ. ಈ 71ದಿನಗಳ ಕಾಲ ನಾವು ಪಟ್ಟ ಕಷ್ಟ ಆ ದೇವರಿಗೆ ಗೊತ್ತು ಎಂದು ರಂಜಿತ್​ ತಂದೆ ಕಂಬನಿ ಮಿಡಿದರು. ರಂಜಿತ್​ ಹೆಂಡತಿ ಮತ್ತು ಐದು ವರ್ಷದ ಮಗಳನ್ನು ಅಗಲಿದ್ದಾರೆ.

ಇದನ್ನೂ ಓದಿ: ಜನ್ ಧನ್ ಯೋಜನೆಗೆ 10 ವರ್ಷ: 53 ಕೋಟಿ ಫಲಾನುಭವಿಗಳು, 2.31 ಲಕ್ಷ ಕೋಟಿ ಬ್ಯಾಂಕ್​​​​ ಬ್ಯಾಲೆನ್ಸ್

ABOUT THE AUTHOR

...view details