ಕರ್ನಾಟಕ

karnataka

By ETV Bharat Karnataka Team

Published : 5 hours ago

ETV Bharat / bharat

ಜಾರ್ಖಂಡ್​ನಲ್ಲಿ ರೈಲು ಹಳಿ ಸ್ಫೋಟಿಸಿದ ದುಷ್ಕರ್ಮಿಗಳು: ಯಾರದೀ ಕೈವಾಡ? - Explosion on railway track

ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿ ಲಾಲ್ಮಟಿಯಾದಿಂದ ಫರಕ್ಕಾಗೆ ಎಂಜಿಆರ್ ರೈಲು ಮಾರ್ಗದಲ್ಲಿ ದುಷ್ಕರ್ಮಿಗಳು ಸ್ಫೋಟಕಗಳನ್ನು ಇಟ್ಟು ರೈಲು ಹಳಿಯನ್ನು ಸ್ಫೋಟಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

BLAST ON RAILWAY TRACK IN SAHIBGANJ JHARKHAND
ಜಾರ್ಖಂಡ್​: ರೈಲು ಹಳಿ ಸ್ಫೋಟಿಸಿದ ದುಷ್ಕರ್ಮಿಗಳು (ETV Bharat)

ಸಾಹಿಬ್​ಗಂಜ್​:ಜಾರ್ಖಂಡ್​ನ ಸಾಹಿಬ್​ಗಂಜ್​ ಜಿಲ್ಲೆಯ ಬರ್ಹೆತ್​ ಪೊಲೀಸ್​ ಠಾಣೆಯ ವ್ಯಾಪ್ತಿಯ ರಂಗಾಗುತ್ತು ಗ್ರಾಮದ ಬಳಿ ಲಾಲ್ಮಟಿಯಾದಿಂದ ಫರಕ್ಕಾವರೆಗಿನ ಎಂಜಿಆರ್​ ರೈಲು ಮಾರ್ಗದಲ್ಲಿ ದುಷ್ಕರ್ಮಿಗಳು ಸ್ಫೋಟಕ ಸಿಡಿಸಿರುವ ಘಟನೆ ನಡೆದಿದೆ.

ರೈಲು ಹಳಿ ಸ್ಫೋಟಗೊಂಡಿರುವ ಕಾರಣ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದಿಂದಾಗಿ ರೈಲ್ಬೆ ಹಳಿಯಲ್ಲಿ ಮೂರು ಅಡಿ ಆಳದ ಕುಳಿ ಸೃಷ್ಟಿಯಾಗಿದ್ದು, ಸುಮಾರು 39 ಮೀಟರ್​ ದೂರದಲ್ಲಿ ಹಳಿಯ ಅವಶೇಷಗಳು ಬಿದ್ದಿರುವುದು ಕಂಡು ಬಂದಿದೆ. ಈ ರೈಲು ಮಾರ್ಗವನ್ನು ಕಲ್ಲಿದ್ದಲು ಸಾಗಿಸಲು ಬಳಸಲಾಗುತ್ತದೆ.

ಸ್ಫೋಟದ ಸದ್ದು ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಕೇಳಿಸಿದೆ. ಸ್ಫೋಟ ನಡೆದ ಸ್ಥಳದಲ್ಲಿ ಗೊಡ್ಡಾದ ಲಾಲ್ಮಟಿಯಾದಿಂದ ಫರಕ್ಕಾಗೆ ಕಲ್ಲಿದ್ದಲು ಹೊತ್ತು ಸಾಗುತ್ತಿದ್ದ ರೈಲು ನಿಂತಿತ್ತು. ಹಳಿ ಸ್ಫೋಟಗೊಂಡ ಕಾರಣ ರೈಲು ಮುಂದೆ ಚಲಿಸಲು ಸಾಧ್ಯವಾಗಲಿಲ್ಲ.

ಅಧಿಕಾರಿಗಳ ತಂಡ ಸ್ಥಳಕ್ಕೆ: ಘಟನೆ ಬಗ್ಗೆ ಮಾಹಿತಿ ಪಡೆದ ಎಸ್​ಪಿ ಕುಮಾರ್​ ಸಿಂಗ್​, ಬರ್ಹರ್ವಾ ಡಿಎಸ್​ಪಿ ಮಂಗಲ್​ ಸಿಂಗ್​ ಜಮುದಾ, ಎಸ್​ಟಿಪಿಸಿ ಸಹಾಯಕ ಇಂಜಿನಿಯರ್​ ಶರ್ಬತ್​ ಹುಸೇನ್​, ಜೂನಿಯರ್​ ಇಂಜಿನಿಯರ್​ ದೇವಯಾನ್​, ಬರ್ಹೆತ್​ ಪೊಲೀಸ್​ ಠಾಣೆ ಪ್ರಭಾರಿ ಪವನ್​ ಯಾದವ್​ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದರು. 15 ಮೀಟರ್​ ದೂರದಲ್ಲಿ ಸ್ಫೋಟಕ್ಕೆ ಬಳಸಲಾದ ತಂತಿಗಳು ಪತ್ತೆಯಾಗಿವೆ. ಈ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ಪ್ರಾರಂಭಿಸಿದ್ದಾರೆ.

ಎಫ್‌ಎಸ್‌ಎಲ್ ತಂಡದಿಂದಲೂ ತನಿಖೆ: ಕಳೆದ ಐದು ವರ್ಷಗಳಿಂದ, ಅಸ್ಸಾಂನ ರಾಷ್ಟ್ರೀಯ ಸಂತಾಲ್ ಲಿಬರೇಶನ್ ಆರ್ಮಿಯ ನಿಷೇಧಿತ ಉಗ್ರಗಾಮಿ ಸಂಘಟನೆಯ ಜನ ಈ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್​​​ಪಿ ಅಮಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಸ್ಫೋಟಕ್ಕೆ ಬಳಸಲಾದ ವಸ್ತು ಕಂಡುಹಿಡಿಯಲು ಎಫ್‌ಎಸ್‌ಎಲ್ ತಂಡವನ್ನು ಕರೆಯಲಾಗಿದೆ.

ಇದನ್ನೂ ಓದಿ:ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಗಳ ವಿರುದ್ಧ ಮತ್ತೊಂದು ಚಾರ್ಜ್‌ಶೀಟ್ - Rameswaram cafe blast case

ABOUT THE AUTHOR

...view details