ಹೈದರಾಬಾದ್: ತೆಲುಗು ನಟಿ ಸಮಂತಾ ಮತ್ತು ನಟ ಅಕ್ಕಿನೇನಿ ನಾಗಚೈತನ್ಯ ಅವರ ವಿಚ್ಛೇದನಕ್ಕೆ ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಕಾರಣ ಎಂಬ ತೆಲಂಗಾಣ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವೆ ಕೊಂಡಾ ಸುರೇಖಾ ಅವರು ಬುಧವಾರ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.
ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗ ಬಿಆರ್ಎಸ್ ನಾಯಕನ ಮೇಲೆ ತೀವ್ರ ವಾಗ್ದಾಳಿ ನಡೆಸಿದ ತೆಲಂಗಾಣ ಸಚಿವೆ, ಕೆಟಿಆರ್ ಒಬ್ಬ ಮಾದಕ ದ್ರವ್ಯಗಳ ವ್ಯಸನಿ. ಚಿತ್ರರಂಗದ ಖ್ಯಾತನಾಮರಿಗೆ ಆತ ರೇವ್ ಪಾರ್ಟಿ ಆಯೋಜನೆ ಮಾಡುತ್ತಿದ್ದ. ತಾನು ಡ್ರಗ್ಸ್ ತೆಗೆದುಕೊಳ್ಳುವುದಲ್ಲದೇ, ಚಿತ್ರರಂಗದ ನಾಯಕಿಯರಿಗೂ ಈ ಚಟವನ್ನು ಕಲಿಸಿದ್ದಾನೆ. ಈತನ ದೌರ್ಜನ್ಯದಿಂದಾಗಿ ಹಲವು ನಾಯಕಿಯರು ಸಿನಿಮಾ ಕ್ಷೇತ್ರವನ್ನೇ ತೊರೆದಿದ್ದಾರೆ. ಇನ್ನು ಕೆಲವರು ಮದುವೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಈಚೆಗೆ ಒಡೆದು ಹಾಕಿರುವ ನಾಗಾರ್ಜುನ ಒಡೆತನದ ಎನ್- ಕನ್ವೆನ್ಷನ್ ಸೆಂಟರ್ ಬೇಡ ಎಂದಾದಲ್ಲಿ ತನ್ನ ಬಳಿಗೆ ಅವರನ್ನು ಕಳುಹಿಸುವಂತೆ ಮಾಜಿ ಸಚಿವ ಕೆಟಿಆರ್ ನಟ ನಾಗಾರ್ಜುನ ಬಳಿ ಬೇಡಿಕೆ ಇಟ್ಟಿದ್ದ. ಅವರ ಬಳಿ ಹೋಗುವಂತೆ ನಟಿಗೆ ನಾಗಾರ್ಜುನ ಬಲವಂತ ಮಾಡಿದಾಗ, ಅದನ್ನು ಆಕೆ ವಿರೋಧಿಸಿದ್ದರು. ಇದೇ ವಿಚಾರಕ್ಕಾಗಿ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದುಕೊಳ್ಳಲು ಕಾರಣವಾಯಿತು ಎಂದಿದ್ದಾರೆ.
ಇಷ್ಟು ಮಾತ್ರವಲ್ಲ, ಬಿಆರ್ಎಸ್ ನಾಯಕ ಕೆಟಿಆರ್ ಅನೇಕ ಜನರಿಗೆ ತೊಂದರೆ, ಕೊಟ್ಟಿದ್ದು ಬ್ಲ್ಯಾಕ್ಮೇಲ್ ಮಾಡಿ ಹೆದರಿಸಿದ್ದಾನೆ. ತನ್ನ ವಿರುದ್ಧವೂ ಇಲ್ಲಸಲ್ಲದ ಆರೋಪ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮಾನಹರಣ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
గౌరవనీయ మంత్రివర్యులు శ్రీమతి కొండా సురేఖ గారి వ్యాఖ్యలని తీవ్రంగా ఖండిస్తున్నాను. రాజకీయాలకు దూరంగా ఉండే సినీ ప్రముఖుల జీవితాలని, మీ ప్రత్యర్ధులని విమర్శించేందుకు వాడుకోకండి. దయచేసి సాటి మనుషుల వ్యక్తిగత విషయాలని గౌరవించండి. బాధ్యత గలిగిన పదవి లో ఉన్న మహిళగా మీరు చేసిన…
— Nagarjuna Akkineni (@iamnagarjuna) October 2, 2024
ನಟ ನಾಗಾರ್ಜುನ ಕಿಡಿ: ಸಚಿವೆ ಕೊಂಡಾ ಸುರೇಖಾ ಅವರ ಈ ಹೇಳಿಕೆಗೆ ನಟ, ನಾಗಚೈತನ್ಯ ಅವರ ತಂದೆ ನಾಗಾರ್ಜುನ ಅವರು ಕಿಡಿಕಾರಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸಚಿವೆ ನೀಡಿರುವ ಹೇಳಿಕೆಗಳು ಸುಳ್ಳು, ಅಸಂಬದ್ಧವಾಗಿವೆ. ತಕ್ಷಣವೇ ಅವರು ನೀಡಿದ ಹೇಳಿಕೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಬೇರೆಯವರ ಖಾಸಗಿತನವನ್ನು ಗೌರವಿಸಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ಮಹಿಳೆಯಾಗಿ ಇನ್ನೊಬ್ಬ ಮಹಿಳೆ ಮತ್ತು ಕುಟುಂಬದ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುವುದು ಸಲ್ಲದು. ರಾಜಕೀಯ ವಿರೋಧಿಗಳನ್ನು ಟೀಕಿಸಲು ಚಿತ್ರ ನಟಿಯರನ್ನು ಬಳಸಿಕೊಳ್ಳಬೇಡಿ ಎಂದು ಖಂಡಿಸಿದ್ದಾರೆ.
ಇನ್ನು, ಸುರೇಖಾ ಅವರ ಹೇಳಿಕೆಗಳ ಬಗ್ಗೆ ಹಲವರು ತೀವ್ರವಾಗಿ ಖಂಡಿಸಿದ್ದಾರೆ. ಸಿಎಂ ರೇವಂತ್ ರೆಡ್ಡಿ ಅವರು ಕೂಡ ಸಚಿವೆಗೆ ಫೋನ್ ಕರೆ ಮಾಡಿ ವಿವಾದಿತ ಹೇಳಿಕೆ ನೀಡಿರುವ ಬಗ್ಗೆ ಟೀಕಿಸಿ, ಎಚ್ಚರಿಕೆ ನೀಡಿದ್ದಾಗಿ ವರದಿಯಾಗಿದೆ.