ನವದೆಹಲಿ: ಅನ್ನದಾತರಿಗೆ ಸಂತಸದ ಸುದ್ದಿ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತಿನ ಬಿಡುಗಡೆ ದಿನಾಂಕವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಯೋಜನೆಯ ಮೂಲಕ 9 ಕೋಟಿಗೂ ಹೆಚ್ಚು ರೈತರು ಪ್ರಯೋಜನ ಪಡೆಯಲಿದ್ದಾರೆ. ಹಾಗಾದರೆ, ಈ ಹಣ ರೈತರ ಖಾತೆಗೆ ಜಮಾ ಆಗುವುದು ಯಾವಾಗ? ಇ-ಕೆವೈಸಿಯನ್ನು ಯಾರಾದರೂ ಇನ್ನೂ ಮಾಡದಿದ್ದರೆ ಅದನ್ನು ಪೂರ್ಣಗೊಳಿಸುವುದು ಹೇಗೆ? ಅದನ್ನು ಈ ಸ್ಟೋರಿಯಲ್ಲಿ ನೋಡೋಣ.
ರೈತರಿಗೆ ಆರ್ಥಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2019 ರ ಫೆಬ್ರವರಿಯಲ್ಲಿ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ರೈತರಿಗೆ ಪ್ರತಿ ಎಕರೆಗೆ ವರ್ಷಕ್ಕೆ 6 ಸಾವಿರ ರೂಪಾಯಿ ಬೆಳೆ ನೆರವು ನೀಡಲಾಗುತ್ತಿದೆ. ಈ 6 ಸಾವಿರ ರೂಪಾಯಿಯನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಏಪ್ರಿಲ್ - ಜುಲೈ ತಿಂಗಳಲ್ಲಿ ಮೊದಲ ಕಂತು, ಆಗಸ್ಟ್-ನವೆಂಬರ್ನಲ್ಲಿ ಎರಡನೇ ಕಂತು ಮತ್ತು ಡಿಸೆಂಬರ್-ಮಾರ್ಚ್ ಮೂರನೇ ಕಂತುಗಳಿಗೆ 2 ಸಾವಿರ ರೂಪಾಯಿಯನ್ನು ರೈತರಿಗೆ ನೇರವಾಗಿ ತಲುಪಿಸಲಾಗುತ್ತದೆ.
ಪಿಎಂ ಕಿಸಾನ್ ಯೋಜನೆ ಮೂಲಕ ಕೇಂದ್ರ ಸರ್ಕಾರ ಇದುವರೆಗೆ 17 ಬಾರಿ ರೈತರ ಖಾತೆಗೆ ಹಣ ಬಿಡುಗಡೆ ಮಾಡಿದೆ. ಇದೀಗ 18ನೇ ಕಂತಿನ ಹಣ ಬಿಡುಗಡೆಗಾಗಿ ಕಾದು ಕುಳಿತಿರುವ ರೈತರಿಗೆ ದಸರಾ ಮುನ್ನವೇ ಕೇಂದ್ರ ಶುಭಸುದ್ದಿ ನೀಡಿದೆ. ಅಕ್ಟೋಬರ್ 5 ರಂದು 18 ನೇ ಕಂತಿನ ಪಿಎಂ ಕಿಸಾನ್ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಅದೇ ರೀತಿ ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ 2 ಸಾವಿರ ರೂಪಾಯಿ ಪಡೆಯಲು ಅಧಿಕೃತ ವೆಬ್‌ಸೈಟ್‌ನಲ್ಲಿ ಇ - ಕೆವೈಸಿ ಮಾಡಬೇಕು ಎಂದು ಸೂಚಿಸಲಾಗಿದೆ. ಮೇಲಾಗಿ, ಕೇಂದ್ರ ಸರ್ಕಾರ ಕೂಡ ಹಲವು ಬಾರಿ ಸ್ಪಷ್ಟನೆ ನೀಡುತ್ತಲೇ ಬಂದಿದೆ. ಯಾರಾದರೂ ಇನ್ನೂ ಇ-ಕೆವೈಸಿ ಮಾಡದೇ ಇದ್ದರೆ ತಕ್ಷಣವೇ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇ-ಕೆವೈಸಿ ಮಾಡುವುದು ಹೇಗೆ?
- ಮೊದಲು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ https://pmkisan.gov.in/ ಗೆ ಲಾಗಿನ್ ಆಗಿ.
- ನಂತರ ಮುಖಪುಟದ ಬಲಭಾಗದಲ್ಲಿರುವ e-KYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು 'ಸರ್ಚ್' ಬಟನ್ ಒತ್ತಿರಿ.
- ನಂತರ ವಿವರಗಳು ಪರದೆಯ ತೆರೆದುಕೊಳ್ಳುತ್ತವೆ. OTP ಸಹಾಯದಿಂದ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ಇಲ್ಲವೇ.. PM ಕಿಸಾನ್ ಆ್ಯಪ್‌ನಲ್ಲಿ ಫೇಸ್ ಅಥೆಂಟಿಕೇಷನ್ ಮೂಲಕ KYC ಪ್ರಕ್ರಿಯೆ ಪೂರ್ಣಗೊಳಿಸಬಹುದು.
- ಹತ್ತಿರದ ಸೇವಾ ಕೇಂದ್ರಕ್ಕೆ ಹೋದರೂ ಬಯೋಮೆಟ್ರಿಕ್ಸ್ ಸಹಾಯದಿಂದ ಇ-ಕೆವೈಸಿ ಮಾಡಬಹುದು.
- ಪಿಎಂ ಕಿಸಾನ್ ಹಣವನ್ನು ಪಡೆಯಲು ಫಲಾನುಭವಿ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಬೇಕು.