ಜಮ್ಮು: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೂರು ಹಂತಗಳಲ್ಲಿ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಮುಗಿದಿದ್ದು, ಒಟ್ಟಾರೆ ಶೇಕಡಾ 63.45 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಂಕಿ- ಅಂಶಗಳು ತಿಳಿಸಿವೆ.
ಅಕ್ಟೋಬರ್ 1 ರಂದು ನಡೆದ ಮೂರನೇ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ ಶೇಕಡಾ 69.65 ರಷ್ಟು ಮತದಾನವಾಗಿದೆ. 75 ವರ್ಷಗಳ ಇತಿಹಾಸ ಹೊಂದಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಮತದಾನದ ಹಕ್ಕು ಮತ್ತು ರಾಜಕೀಯ ಪ್ರಾತಿನಿಧ್ಯ ಹೊಂದಿರದ ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರು, ವಾಲ್ಮೀಕಿಗಳು ಮತ್ತು ಗೂರ್ಖಾ ಸಮುದಾಯಗಳಿಗೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಮತದಾನ ಮಾಡುವ ಹಕ್ಕನ್ನು ನೀಡಿತ್ತು. ಇದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಲೋಕಸಭೆ ಚುನಾವಣೆಗಿಂತ ಹೆಚ್ಚು ಮತದಾನ: ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಗಿಂತ ಹೆಚ್ಚು ಪ್ರಮಾಣದಲ್ಲಿ ವಿಧಾನಸಭೆಗೆ ಜನರು ಮತ ಹಾಕಿದ್ದಾರೆ. ಸೆಪ್ಟೆಂಬರ್ 18 ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಅಂದಾಜು 61.38 ರಷ್ಟು ಮತದಾನವಾಗಿದ್ದರೆ, ಎರಡನೇ ಹಂತದಲ್ಲಿ 57.31 ರಷ್ಟು, ಅಂತಿಮ ಹಂತದಲ್ಲಿ 69.65 ರಷ್ಟು ಮತದಾನ ದಾಖಲಾಗಿದೆ ಎಂದು ತಿಳಿಸಿದೆ.
ಇನ್ನೂ, ಜಮ್ಮು ಜಿಲ್ಲೆಯ ಮಾರ್ಹ್ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ ದಾಖಲಾಗಿದೆ. ಇಲ್ಲಿ 81.47 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರೊಂದಿಗೆ ಚಂಬ್ ಕ್ಷೇತ್ರದಲ್ಲಿ ಶೇಕಡಾ 80.34 ರಷ್ಟು, ಅಖ್ನೂರ್ನಲ್ಲಿ ಶೇ.79.73 ರಷ್ಟು, ಗುರೆಜ್ನಲ್ಲಿ ಶೇ.78.04 ರಷ್ಟು ಮತದಾನ ನಡೆದಿದೆ. ಉಗ್ರ ದಾಳಿಗೆ ಕುಖ್ಯಾತಿಯಾಗಿರುವ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದೆ. ಇಲ್ಲಿ ಶೇ.45.32ರಷ್ಟು ಜನರು ಮಾತ್ರ ಮತ ಹಾಕಿದ್ದಾರೆ. ಚಲಾಯಿಸಿದ್ದಾರೆ.
ಜಿಲ್ಲಾವಾರು ಪೈಕಿ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉಧಂಪುರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಎಂದರೆ, ಶೇಕಡಾ 76.09 ರಷ್ಟು ಮತದಾನವಾಗಿದೆ. 6 ವಿಧಾನಸಭಾ ಕ್ಷೇತ್ರಗಳ ಕಥುವಾ ಜಿಲ್ಲೆಯಲ್ಲಿ ಶೇಕಡಾ 73.34, 11 ವಿಧಾನಸಭಾ ಕ್ಷೇತ್ರಗಳ ಜಮ್ಮು ಜಿಲ್ಲೆಯಲ್ಲಿ ಶೇಕಡಾ 71.40, ಬಂಡಿಪೋರಾ ಜಿಲ್ಲೆಯಲ್ಲಿ ಶೇಕಡಾ 67.68, ಕುಪ್ವಾರದಲ್ಲಿ ಶೇಕಡಾ 66.79 ಮತ್ತು ಬಾರಾಮುಲ್ಲಾ ಜಿಲ್ಲೆಯಲ್ಲಿ ಕಡಿಮೆ ಶೇಕಡ 61.03 ರಷ್ಟು ಮತದಾನವಾಗಿದೆ ಎಂದು ಅಂಕಿ - ಅಂಶಗಳು ತಿಳಿಸಿವೆ.
ಸೂಕ್ಷ್ಮ ಮತಗಟ್ಟೆಗಳಲ್ಲೂ ಉತ್ತಮ ಮತ: ಅಂತರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯ (ಎಲ್‌ಒಸಿ) ವಿಶೇಷ ಮತಗಟ್ಟೆಗಳು ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಎಲ್ಲೆಡೆಯೂ 2014 ಕ್ಕೆ ಹೋಲಿಕೆ ಮಾಡಿದರೆ, ಉತ್ತಮ ಮತದಾನ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2019 ರ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ಶಾಂತಿಯುತ ಮುಕ್ತಾಯ; ಒಂದೇ ಒಂದು ಕಡೆ ಮರು ಮತದಾನ ಇಲ್ಲ - Jammu Kashmir Assembly Polls