ನವದೆಹಲಿ :ರಾಷ್ಟ್ರ ರಾಜಧಾನಿಯ ನೂತನ ಬಿಜೆಪಿ ಸರ್ಕಾರದ ಸ್ಪೀಕರ್ ಆಗಿ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಆಯ್ಕೆಯಾಗಿದ್ದಾರೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ರೋಹಿಣಿ ಕ್ಷೇತ್ರದ ಶಾಸಕರನ್ನು ಆಯ್ಕೆಗೆ ಪ್ರಸ್ತಾಪಿಸಿದ್ದರು.
ಸಂಪ್ರದಾಯದಂತೆ ನೂತನ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಹಂಗಾಮಿ ಸ್ಪೀಕರ್ ಆಗಿ ಅರವಿಂದರ್ ಸಿಂಗ್ ಲವ್ಲಿ ಅವರನ್ನು ನೇಮಕ ಮಾಡಲಾಗಿತ್ತು. ಅವರಿಗೆ ಇಂದು ಬೆಳಗ್ಗೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ಪ್ರಮಾಣ ವಚನ ಬೋಧಿಸಿದ್ದರು. ಇದೀಗ ವಿಜೇಂದರ ಗುಪ್ತಾ ಆಯ್ಕೆಯಾಗಿದ್ದಾರೆ. ಅವರಿಗೆ ಸಿಎಂ ರೇಖಾ ಗುಪ್ತಾ ಮತ್ತು ವಿಪಕ್ಷ ನಾಯಕಿ ಅತಿಶಿ ಶುಭಾಶಯ ಕೋರಿದರು.
ಇಂದಿನಿಂದ ಮೂರು ದಿನಗಳ ಕಾಲ ಸದನ ನಡೆಯಲಿದ್ದು, ಸಿಎಂ ರೇಖಾ ಗುಪ್ತಾ ಸೇರಿದಂತೆ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.
ದೆಹಲಿಗೆ ಸಮರ್ಪಣೆ ಮಾಡಿ ನಾನು ಪ್ರತಿಜ್ಞೆ ಮಾಡುತ್ತಿದ್ದು, ಇಂದು ನಾನು ದೆಹಲಿ ವಿಧಾನಸಭೆಯಲ್ಲಿ ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದೆ. ಶಾಲಿಮರ್ ಬಾಗ್ ನನ್ನ ಕರ್ಮಭೂಮಿಯಾಗಿದೆ. ಆದರೆ, ದೆಹಲಿಯ ಪ್ರತಿ ನಾಗರಿಕರು ನನ್ನ ಕುಟುಂಬ. ರಾಜ್ಯದ ಸಂಪೂರ್ಣ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆಗೆ ನಾನು ಬದ್ಧವಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಪ್ರೇರಣೆಗೊಂಡಿದ್ದು ದೆಹಲಿಯ ಅಭಿವೃದ್ಧಿ ನಿರ್ಮಾಣಕ್ಕೆ ನಾನು ಬದ್ಧಳಾಗಿದ್ದೇನೆ ಎಂದು ಎಕ್ಸ್ನಲ್ಲಿ ತಿಳಿಸಿದ್ದಾರೆ.
ಗುರುವಾರ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ರೇಖಾ ಗುಪ್ತಾ ತಮ್ಮ ಮೊದಲ ಸಂಪುಟ ಸಭೆಯಲ್ಲಿ ಪ್ರಮುಖ ಎರಡು ನಿರ್ಧಾರಗಳನ್ನು ಘೋಷಿಸಿದ್ದರು. ಕೇಂದ್ರ ಸರ್ಕಾರದ ಜತೆಗೆ ರಾಜ್ಯ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆ ಅಳವಡಿಕೆ ಮತ್ತು ಮೊದಲ ಅಧಿವೇಶನದಲ್ಲೇ ಬಾಕಿ ಉಳಿದಿರುವ 14 ಸಿಎಜಿ ವರದಿಗಳ ಮಂಡನೆ ಮಾಡುವ ಕುರಿತು ಮಾಹಿತಿ ನೀಡಿದ್ದರು.