ಲಕ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸಿರುವುದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗಲಿದ್ದು, ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಯುವ ಸಮೂಹ ಕೆಳಗಿಳಿಸಲಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದರು.
ಶನಿವಾರ ಲಕ್ನೋದ ಎಸ್‌ಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ, "ಪರೀಕ್ಷೆ ರದ್ದತಿ ಬ್ರೇಕಿಂಗ್ ನ್ಯೂಸ್ ಆಗಿರಬಹುದು. ಆದರೆ ಯುಪಿಯ ಪ್ರತಿ ಕ್ಷೇತ್ರದಲ್ಲಿ 2.5 ಲಕ್ಷಕ್ಕೂ ಹೆಚ್ಚು ಮತಗಳನ್ನು ಕಳೆದುಕೊಳ್ಳುವುದರಿಂದ ಬಿಜೆಪಿಗೆ ಇದು ಆಘಾತಕಾರಿ ಸುದ್ದಿ" ಎಂದು ಹೇಳಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯನ್ನು ಯುಪಿ ಸರ್ಕಾರ ಶನಿವಾರ ರದ್ದುಗೊಳಿಸಿದೆ, ಆರು ತಿಂಗಳೊಳಗೆ ಮರು ಪರೀಕ್ಷೆ ನಡೆಸುವಂತೆ ಆದೇಶ ಸಹ ಹೊರಡಿಸಿದೆ. ಆದ್ರೆ ಈ ಕುರಿತು ಸರ್ಕಾರದ ವಿರುದ್ಧ ಹರಿಹಾಯ್ದಿರುವ ಯಾದವ್, "ಪೊಲೀಸ್ ನೇಮಕಾತಿ ಪರೀಕ್ಷೆಗೆ 60 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರೆ, ಮತ್ತು ನಾವು ಅವರ ಪೋಷಕರನ್ನು ಎಣಿಕೆ ಮಾಡಿದರೆ, ಆ ಸಂಖ್ಯೆ ಸಂಖ್ಯೆ 1.8 ಕೋಟಿಗೆ ತಲುಪುತ್ತದೆ. ಇದರರ್ಥ ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಪ್ರತಿಯೊಂದರಲ್ಲಿ ಸುಮಾರು 2.5 ಲಕ್ಷ ಜನರು ಬಿಜೆಪಿ ವಿರುದ್ಧ ಮತ ಚಲಾಯಿಸಲಿದ್ದಾರೆ. ಪ್ರತಿ ಕ್ಷೇತ್ರದಲ್ಲಿ 2.5 ಲಕ್ಷ ಮತಗಳನ್ನು ಕಳೆದುಕೊಳ್ಳುವುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು ಮತ್ತು ವರ್ಷಗಟ್ಟಲೆ ಪೊಲೀಸ್ ನೇಮಕಾತಿಗಾಗಿ ಕಾಯುತ್ತಿದ್ದ ಯುವಕರು ಈಗ ಬಿಜೆಪಿಯನ್ನು ರಾಜ್ಯದಿಂದ ತೆಗೆದುಹಾಕುತ್ತಾರೆ'' ಎಂದು ಯಾದವ್ ಭವಿಷ್ಯ ನುಡಿದರು.