ಚಂಡೀಗಢ:ಮಂಗಳವಾರ ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತು. ಸೋಲನುಭವಿಸಿದ ಎಎಪಿ-ಕಾಂಗ್ರೆಸ್ ಮೈತ್ರಿಕೂಟವು ಚುನಾವಣೆಯನ್ನು ಮೋಸದಾಟ ಎಂದು ಆರೋಪಿಸಿದೆ. ಮತ್ತೊಮ್ಮೆ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್‌ನ 35 ಸದಸ್ಯರ ಸದನದಲ್ಲಿ ಎರಡು ವಿರೋಧ ಪಕ್ಷದ ಪಾಲುದಾರರು ಸುಲಭ ಜಯ ಗಳಿಸುವ ಬಗ್ಗೆ ಊಹಿಸಿದ್ದರು. ಇದು ಇಂಡಿಯಾ ಮೈತ್ರಿಕೂಟಕ್ಕೆ ಆರಂಭಿಕ ಪರೀಕ್ಷೆ ಎಂಬಂತೆ ಬಿಂಬಿತವಾಗಿತ್ತು. ಆದರೆ, ಚುನಾವಣೆ ನಡೆದ ನಂತರ ಎಲ್ಲ ಮೂರು ಉನ್ನತ ಹುದ್ದೆಗಳನ್ನು ಬಿಜೆಪಿ ತನ್ನ ಬಳಿ ಉಳಿಸಿಕೊಂಡಿದೆ. ಮೇಯರ್ ಸ್ಥಾನದ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಉಭಯ ಪಕ್ಷಗಳ ಕೌನ್ಸಿಲರ್‌ಗಳು ಸದನದಲ್ಲಿ ಕೋಲಾಹಲ ಸೃಷ್ಟಿಸಿದರು.
ಮೇಯರ್ ಗಾದಿಗೇರಿದ ಮನೋಜ್ ಸೋಂಕರ್:ಮೇಯರ್ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮನೋಜ್ ಸೋಂಕರ್ ಅವರು ಎಎಪಿಯ ಕುಲದೀಪ್ ಕುಮಾರ್ ಅವರನ್ನು ಮಣಿಸಿದರು. ಕುಲದೀಪ್ ಕುಮಾರ್ 12 ಮತ ಪಡೆದರೆ, ಮನೋಜ್ ಸೋಂಕರ್ 16 ಮತಗಳನ್ನು ಗಳಿಸಿದರು. ಎಂಟು ಮತಗಳು ಅಸಿಂಧು ಎಂದು ಘೋಷಿಸಲಾಯಿತು. ಪ್ರತಿಪಕ್ಷಗಳ ಬಹಿಷ್ಕಾರದ ನಂತರ, ಬಿಜೆಪಿ ನಾಮನಿರ್ದೇಶಿತರಾದ ಕುಲ್ಜಿತ್ ಸಂಧು ಮತ್ತು ರಾಜಿಂದರ್ ಶರ್ಮಾ ಕ್ರಮವಾಗಿ ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಆಯ್ಕೆಯಾದರು. ಇಬ್ಬರು ತಲಾ 16 ಮತಗಳನ್ನು ಪಡೆದಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರ್ದೇಶನದ ಮೇರೆಗೆ ಮಂಗಳವಾರ ಚುನಾವಣೆ ನಡೆಯಿತು. ಪ್ರತಿಪಕ್ಷದ ಅನಿಲ್ ಮಸಿಹ್ ಅವರು, ಮತಪತ್ರಗಳನ್ನು ಟ್ಯಾಂಪರಿಂಗ್ ಮಾಡಲಾಗಿದೆ ಎಂದು ಆರೋಪಿಸಿದರು. ಫಲಿತಾಂಶದ ಕೆಲವೇ ಗಂಟೆಗಳ ನಂತರ, ಆಮ್ ಆದ್ಮಿ ಪಕ್ಷದ ಪರಾಜಿತ ಅಭ್ಯರ್ಥಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಎಎಪಿ ಪಕ್ಷದ ಮುಖಂಡರು ತಿಳಿಸಿದ್ದಾರೆ.