ರಾಯ್‌ಗಢ (ಛತ್ತೀಸ್‌ಗಢ):ಬಿಜೆಪಿ ಮತ್ತು ಆರ್‌ಎಸ್‌ಎಸ್ ದ್ವೇಷವನ್ನು ಹರಡುತ್ತಿವೆ. ಆದರೆ, ಈ ದೇಶದ ಡಿಎನ್‌ಎದಲ್ಲಿಯೇ ಪ್ರೀತಿ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ. ಛತ್ತೀಸ್‌ಗಢದ ರಾಯ್‌ಗಢ ನಗರದಲ್ಲಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಭಾನುವಾರ ಪುನರಾರಂಭಿಸಿದ್ದಾರೆ.
ರಾಯ್‌ಗಢ್‌ನ ಕೆವದಬಾದಿ ಚೌಕ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಪಕ್ಷವು "ಭವಿಷ್ಯದ ಪೀಳಿಗೆಗೆ ದ್ವೇಷ ಮತ್ತು ಹಿಂಸೆ ಅಸ್ತಿತ್ವದಲ್ಲಿಲ್ಲದ ಹಿಂದೂಸ್ಥಾನ" ವನ್ನು ಬಯಸುತ್ತದೆ ಎಂದಿದ್ದಾರೆ. ''ಸದ್ಯ ದೇಶದ ಮೂಲೆ ಮೂಲೆಗಳಲ್ಲಿ ದ್ವೇಷ, ಹಿಂಸಾಚಾರ ಹರಡುತ್ತಿದೆ. ಕೆಲವರು ಅವರ ಭಾಷೆಯ ಆಧಾರದ ಮೇಲೆ ಇತರರನ್ನು ಇಷ್ಟಪಡುವುದಿಲ್ಲ ಎಂದು ಹೇಳುತ್ತಾರೆ. ಇನ್ನು ಕೆಲವರು ತಾವು ಸೇರಿದ ರಾಜ್ಯಗಳ ಆಧಾರದ ಮೇಲೆ ಇತರರನ್ನು ಇಷ್ಟಪಡುವುದಿಲ್ಲ ಎಂದು ಹೇಳುತ್ತಾರೆ. ಇಂತಹ ಚಿಂತನೆಗಳು ದೇಶವನ್ನು ದುರ್ಬಲಗೊಳಿಸುತ್ತವೆ’’ ಎಂದು ತಿಳಿಸಿದ್ದಾರೆ.
"ಈ ದೇಶದಲ್ಲಿ ವಿಭಿನ್ನ ನಂಬಿಕೆಗಳಿಗೆ ಸೇರಿದ ಮತ್ತು ವಿಭಿನ್ನ ಆಲೋಚನೆಗಳನ್ನು ಹೊಂದಿರುವ ಜನರು ಪರಸ್ಪರ ಪ್ರೀತಿಯಿಂದ, ಶಾಂತಿಯುತವಾಗಿ ಒಟ್ಟಿಗೆ ಬದುಕುತ್ತಾರೆ" ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು. ಕಳೆದ ವರ್ಷ ಮೇ ತಿಂಗಳಿನಿಂದ ನೂರಾರು ಜನರು ಸಾಯುತ್ತಿದ್ದರೂ ಮತ್ತು ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದ್ದರೂ ಇದುವರೆಗೆ ಕಲಹ ಪೀಡಿತ ಮಣಿಪುರಕ್ಕೆ ಪ್ರಧಾನಿ ಮೋದಿ ಅವರು ಭೇಟಿ ನೀಡಿಲ್ಲ ಎಂದು ಇದೇ ವೇಳೆ ತರಾಟೆಗೆ ತೆಗೆದುಕೊಂಡರು.