ನವದೆಹಲಿ: ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಯಾವುದೇ ಜಾಹೀರಾತನ್ನು ಪ್ರಕಟಿಸದಂತೆ ಏಕಸದಸ್ಯ ಪೀಠ ನೀಡಿರುವ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಕೋಲ್ಕತ್ತಾ ಹೈಕೋರ್ಟ್ನ ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಶುಕ್ರವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬೇಲಾ.ಎಂ.ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ರಜಾಕಾಲದ ಪೀಠದ ಮುಂದೆ ಬಿಜೆಪಿ ಅರ್ಜಿ ವಿಚಾರಣೆಗೆ ಬಂದಿದೆ. ಈ ವೇಳೆ, ಬಿಜೆಪಿ ಪರ ಹಾಜರಾದ ವಕೀಲ ಸೌರಭ್ ಮಿಶ್ರಾ, ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಜೂನ್ 4ರವರೆಗೆ ಬಿಜೆಪಿ ಜಾಹೀರಾತು ನೀಡದಂತೆ ಮೇ 22ರಂದು ಕೋಲ್ಕತ್ತಾ ಹೈಕೋರ್ಟ್ ನಿರ್ಬಂಧ ಹೇರಿದೆ ಎಂದು ನ್ಯಾಯ ಪೀಠಕ್ಕೆ ತಂದರು.
ಅಲ್ಲದೇ, ಈ ವಿಷಯದ ವಿಚಾರಣೆಗೆ ತುರ್ತು ಪಟ್ಟಿ ಮಾಡಬೇಕು ಎಂದು ಸೌರಭ್ ಮಿಶ್ರಾ ಕೋರಿದರು. ಆಗ ನ್ಯಾಯ ಪೀಠವು, ನೀವು ಮುಂದಿನ ರಜಾಕಾಲದ ಪೀಠದ ಮುಂದೆ ಏಕೆ ಹೋಗಬಾರದು? ಎಂದು ಪೀಠ ಕೇಳಿತು. ಈ ವೇಳೆ, ಬಿಜೆಪಿ ವಕೀಲರು ಮೇ 27ರಂದು ವಿಚಾರಣೆಗೆ ವಿಷಯವನ್ನು ಪರಿಗಣಿಸುವಂತೆ ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪೀಠವು ವಿಚಾರಣೆಗೆ ಪಟ್ಟಿ ಮಾಡಲು ಪರಿಶೀಲಿಸುವುದಾಗಿ ತಿಳಿತು.
ಏನಿದು ಪ್ರಕರಣ?: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಬಿಜೆಪಿ ಜಾಹೀರಾತು ನೀಡುತ್ತಿದೆ. ಇದರ ಹೈಕೋರ್ಟ್ ಮೇಟ್ಟಿಲೇರುವ ಟಿಎಂಸಿ ತನ್ನ ಮತ್ತು ತನ್ನ ಕಾರ್ಯಕರ್ತರ ವಿರುದ್ಧ ಪರಿಶೀಲಿಸದ ಆರೋಪಗಳನ್ನು ಮಾಡಲಾಗುತ್ತಿದೆ. ಹೀಗಾಗಿ ಬಿಜೆಪಿಯ ಜಾಹೀರಾತುಗಳಿಗೆ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಜಾಹೀರಾತು ಪ್ರಕಟಿಸದಂತೆ ಬಿಜೆಪಿಗೆ ಮೇ 20ರಂದು ಆದೇಶಿಸಿದೆ.
ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಗಿಯುವ ಜೂನ್ 4ರವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಜಾಹೀರಾತುಗಳನ್ನು ಪ್ರಕಟಿಸದಂತೆ ಬಿಜೆಪಿಗೆ ನಿರ್ಬಂಧ ವಿಧಿಸಲಾಗಿದೆ. ಏಕಸದಸ್ಯ ಪೀಠದ ಆ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಮೇಲ್ಮನವಿ ಸಲ್ಲಿಸಿತ್ತು. ಏಕಸದಸ್ಯ ಪೀಠವು ಯಾವುದೇ ವಿಚಾರಣೆ ನಡೆಸದೆ ಆದೇಶ ನೀಡಿದೆ ಎಂದು ಬಿಜೆಪಿ ಹೇಳಿತ್ತು.
ಆದರೆ, ಈ ಆದೇಶದಲ್ಲಿ ಮಧ್ಯಪ್ರವೇಶಿಸಲು ವಿಭಾಗೀಯ ಪೀಠ ನಿರಾಕರಿಸಿದೆ. ಅಲ್ಲದೇ, ಲಕ್ಷ್ಮಣ ರೇಖೆಯನ್ನು ಪಾಲಿಸಬೇಕು ಮತ್ತು ಯಾವುದೇ ರಾಜಕೀಯ ಪಕ್ಷದ ಕಡೆಯಿಂದ ಯಾವುದೇ ವೈಯಕ್ತಿಕ ಆಕ್ರಮಣ ಮಾಡಬಾರದು ಎಂದು ಹೈಕೋರ್ಟ್ ತಾಕೀತು ಮಾಡಿದೆ.
ಇದನ್ನೂ ಓದಿ:ಲೋಕಸಭೆ ಚುನಾವಣೆ ಕಣದಲ್ಲಿದ್ದಾರೆ 25 ರಿಂದ 30 ವಯೋಮಾನದ 2 ಸಾವಿರಕ್ಕೂ ಅಧಿಕ ತರುಣರು