ರೂರ್ಕೆಲಾ (ಒಡಿಶಾ):ಒಡಿಶಾದಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರವು ಭಾರತೀಯ ಜನತಾ ಪಕ್ಷದ ಪಾಲುದಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯ 25 ನೇ ದಿನದಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಒಡಿಶಾದಲ್ಲಿ ನವೀನ್ ಪಟ್ನಾಯಕ್ ಮತ್ತು ನರೇಂದ್ರ ಮೋದಿ ಅವರ ಸಹಭಾಗಿತ್ವದ ಸರ್ಕಾರವಿದೆ ಎಂದು ವಾಗ್ದಾಳಿ ನಡೆಸಿದರು.
ನಿಮಗೆ ತಿಳಿದಿರುವಂತೆ ಒಡಿಶಾದಲ್ಲಿ ನವೀನ್ ಪಟ್ನಾಯಕ್ ಮತ್ತು ನರೇಂದ್ರ ಮೋದಿ ಪಾಲುದಾರಿಕೆ ಸರ್ಕಾರವನ್ನು ನಡೆಸುತ್ತಿದ್ದಾರೆ. ಇಬ್ಬರೂ ಕೈ ಜೋಡಿಸಿದ್ದಾರೆ. ಮೋದಿ ಅವರ ಆಜ್ಞೆಯ ಮೇರೆಗೆ ಬಿಜೆಡಿ ಜನರು ನಮಗೆ ಕಿರುಕುಳ ನೀಡುವುದನ್ನು ನಾನು ನೋಡಿದ್ದೇನೆ. ಒಡಿಶಾದ ಜನರಿಗಾಗಿ ಕಾಂಗ್ರೆಸ್ ಪಕ್ಷವೇ ಬಿಜೆಡಿ - ಬಿಜೆಪಿಯನ್ನು ವಿರೋಧಿಸುತ್ತಿದೆ ಎಂದು ರಾಹುಲ್ ಆರೋಪಿಸಿದರು.
ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆಯಲು ನಾನು ಒಡಿಶಾಗೆ ಬಂದಿದ್ದೇನೆ (‘ನಫ್ರತ್ ಕಿ ಬಜಾರ್ ಮೆ ಮೊಹಬ್ಬತ್ ಕಿ ದುಕನ್ ಖುಲ್ನೆ ಆಯಾ ಹು’). ರಾಜ್ಯ ಸರ್ಕಾರವು "ಅವರಿಗಾಗಿ ಕೆಲಸ ಮಾಡದ ಕಾರಣ" ರಾಜ್ಯದಿಂದ 30 ಲಕ್ಷ ಜನರು ಜೀವನೋಪಾಯಕ್ಕಾಗಿ ಇತರ ರಾಜ್ಯಗಳಿಗೆ ಕಾರ್ಮಿಕರಾಗಿ ವಲಸೆ ಹೋಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆರೋಪ ಮಾಡಿದರು. "30 ಲಕ್ಷ ಜನರು ತಮ್ಮ ಜೀವನೋಪಾಯಕ್ಕಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದರೆ, ಒಡಿಶಾದ ಹೊರಗಿನ 30 ಕೋಟ್ಯಧಿಪತಿಗಳು ರಾಜ್ಯದ ಸಂಪತ್ತನ್ನು ಲೂಟಿ ಮಾಡಲು ಇಲ್ಲಿಗೆ ಬಂದಿದ್ದಾರೆ" ಎಂದು ರಾಹುಲ್ ಆರೋಪ ಮಾಡಿದರು.
ಒಡಿಶಾದಲ್ಲಿ ಬುಡಕಟ್ಟು ಜನಾಂಗದ ದೊಡ್ಡ ಜನಸಂಖ್ಯೆ ಇದೆ. ಆದರೆ, ದಲಿತರ ಜೊತೆಗೆ ಅವರನ್ನು ಸರ್ಕಾರವು ರಾಜ್ಯದಲ್ಲಿ "ನಿರ್ಲಕ್ಷಿಸುತ್ತಿದೆ". ನಾನು ನಿಮ್ಮ 'ಮನ್ ಕಿ ಬಾತ್' ಅನ್ನು 6/7 ಗಂಟೆಗಳ ಕಾಲ ಕೇಳಲು ಮತ್ತು 15 ನಿಮಿಷಗಳ ಕಾಲ ನಿಮಗಾಗಿ ಸ್ವಲ್ಪ ಮಾತನಾಡಲು ಇಲ್ಲಿಗೆ ಬಂದಿದ್ದೇನೆ ಎಂದು ರಾಹುಲ್ ಹೇಳಿದರು. ಇದಕ್ಕೂ ಮುನ್ನ ಒಡಿಶಾದ ಉಕ್ಕಿನ ನಗರದಲ್ಲಿ ಭಾರತ್ ಜೋಡಾ ನ್ಯಾಯ್ ಯಾತ್ರೆಯನ್ನು ವೇದವ್ಯಾಸ್ ಶಿವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ರಾಹುಲ್ ಆರಂಭಿಸಿದರು ಮತ್ತು ಉದಿತ್‌ನಗರದಿಂದ ಪಂಪೋಶ್ ಚಕ್‌ವರೆಗೆ 3.4 ಕಿಮೀ ಉದ್ದದ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಎಐಸಿಸಿ ಒಡಿಶಾ ಉಸ್ತುವಾರಿ ಅಜೋಯ್ ಕುಮಾರ್ ಮತ್ತು ಒಪಿಸಿಸಿ ಅಧ್ಯಕ್ಷ ಶರತ್ ಪಟ್ನಾಯಕ್ ಅವರೊಂದಿಗೆ ಕಾಂಗ್ರೆಸ್ ನಾಯಕ ಜನರೊಂದಿಗೆ ಬೆರತು ಅವರ ಸಮಸ್ಯೆ ಆಲಿಸಿದರು.
ಓದಿ:'ಇದು ರಾಜಕೀಯ ಚಳವಳಿ ಅಲ್ಲ, ಕರ್ನಾಟಕದ ಹಾಗೂ ಕನ್ನಡಿಗರ ಹಿತ ಕಾಯುವ ಚಳವಳಿ' : ಸಿಎಂ ಸಿದ್ದರಾಮಯ್ಯ