ಬಿಜಾಪುರ (ಛತ್ತೀಸ್ಗಢ):ಭಾನುವಾರ ನಕ್ಸಲ್ ನಿಗ್ರಹ ಪಡೆ ಮತ್ತು ನಕ್ಸಲರ ನಡುವಣ ಗುಂಡಿನ ಚಕಮಕಿಯಲ್ಲಿ 31 ಮಂದಿ ಮಾವೋಗಳು ಸಾವನ್ನಪ್ಪಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಮತ್ತಿಬ್ಬರು ಯೋಧರು ಗಾಯಗೊಂಡಿದ್ದಾರೆ. ಈ ವೇಳೆ ನಕ್ಸಲರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ವಶ:ಘಟನೆ ಕರಿತು ಮಾಹಿತಿ ನೀಡಿರುವ ದಂತೇವಾಡ ಡಿಐಜಿ ಕಮಲೋಚನ್ ಕಶ್ಯಪ್, ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾವೋಗಳು ಇರುವ ಖಚಿತ ಮಾಹಿತಿ ದೊರೆತಿತ್ತು. ಈ ಮಾಹಿತಿ ಹಿನ್ನೆಲೆ ನಮ್ಮ ನಕ್ಸಲ್ ನಿಗ್ರಹ ಪಡೆ ಭಾನುವಾರ ಬೆಳಗ್ಗೆ ದಾಳಿ ನಡೆಸಿ, 31 ನಕ್ಸಲರನ್ನು ಹೊಡೆದುರುಳಿಸಿದೆ. ಈ ಸಂದರ್ಭದಲ್ಲಿ ನಮ್ಮ ಇಬ್ಬರು ಯೋಧರು ವೀರಮರಣವನ್ನಪ್ಪಿದರೆ, ಮತ್ತಿಬ್ಬರು ಗಾಯಗೊಂಡಿದ್ದಾರೆ. ಅವರನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಕಾರ್ಯಾಚರಣೆ ವೇಳೆ, ಎಕೆ 47, ಐಎನ್ಎಸ್ಎಸ್, ಎಸ್ಎಲ್ಆರ್ ಬಿಜಿಎಲ್ ಲಾಂಚರ್ ಸೇರಿದಂತೆ ಶಸ್ತ್ರಾಸ್ತ್ರಗಳು, ಕಾರ್ಟ್ರಿಡ್ಜ್‌ಗಳು, ಬಿಜಿಎಲ್ ಸೆಲ್ ಟಿಫಿನ್ ಬಾಂಬ್‌ಗಳು, ನಕ್ಸಲೀಯ ದಾಖಲೆಗಳು, ನಕ್ಸಲೀಯ ಸಮವಸ್ತ್ರಗಳು, ಇತರ ಸ್ಫೋಟಕ ವಸ್ತುಗಳು ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಅಪಾಯಕಾರಿ ಸುರ್ಖಾ ಕೂಡ ವಶಕ್ಕೆ: ಇದೆ ವೇಳೆ ನಕ್ಸಲರು ಸುರ್ಖಾ ಎಂದು ಕರೆಯುವ ಲಾಂಚರ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇದು ಅತ್ಯಂತ ದೊಡ್ಡ ಸ್ಪೋಟಕವಾಗಿದ್ದು, ಹೆಚ್ಚು ಹಾನಿಕಾರಕವಾಗಿದೆ. ಇದನ್ನು ಬ್ಯಾಟರಿ ಮೂಲಕ ಕಾರ್ಯಾಚರಣೆ ಮಾಡಲಾಗುತ್ತದೆ. ನಕ್ಸಲರ ತಾಂತ್ರಿಕ ತಂಡ ಇದನ್ನು ತಯಾರಿಸಿದೆ ಎಂದು ಡಿಐಜಿ ಮಾಹಿತಿ ನೀಡಿದರು. ಶೋಧದ ವೇಳೆ ಯಾವುದೇ ಗನ್ ಫ್ಯಾಕ್ಟರಿ ಪತ್ತಯಾಗಿಲ್ಲ. ಬಿಜಾಪುರ ಮತ್ತು ಸುಕ್ಮಾದ ಗಡಿ ಪ್ರದೇಶದ ಧರ್ಮಾವರಂ ಶಿಬಿರದಲ್ಲಿಯೂ ಸೈನಿಕರು ಸುರ್ಖಾವನ್ನು ಬಳಸಲಾಗಿದೆ ಎಂದು ಕಶ್ಯಪ್ ಹೇಳಿದರು.