ನಾವಡ (ಬಿಹಾರ): ಯುಜಿಸಿ ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಗಾಗಿ ಬಿಹಾರದ ನಾವಡ ಜಿಲ್ಲೆಗೆ ತೆರಳಿದ್ದ ಸಿಬಿಐ ತಂಡದ ಮೇಲೆಯೇ ದಾಳಿ ಮಾಡಲಾಗಿದೆ. ಅಂದಾಜು 150-200 ಜನರ ಗುಂಪು ಈ ದಾಳಿ ನಡೆಸಿದೆ. ಈ ಸಂಬಂಧ ರಾಜೌಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, 8 ಮಂದಿಯನ್ನು ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿದೆ.
ಇಲ್ಲಿನ ಮುರ್ಹೆನಾ-ಕಾಸಿಯಾದಿಹ್‌ನಲ್ಲಿ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಯುಜಿಸಿ ನೆಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ಬಂಧಿತ ಯುವಕ ನೀಡಿದ ಮಾಹಿತಿಯ ಮೇರೆಗೆ ಸಿಬಿಐ ತಂಡವು ಯುವತಿಯ ಪತ್ತೆಗಾಗಿ ರಾಜೌಲಿ ಪ್ರದೇಶಕ್ಕೆ ತೆರಳಿತ್ತು. ಈ ವೇಳೆ, ತನಿಖಾ ತಂಡದ ಮೇಲೆ ದಾಳಿ ನಡೆದಿದೆ.
ಇದರ ನಡುವೆಯೂ ಸಿಬಿಐ ತಂಡವು ಎರಡು ಮೊಬೈಲ್ ಫೋನ್‌ಗಳು ಮತ್ತು ಕೆಲವು ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ಯುಜಿಸಿ ನೆಟ್‌ಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಒಟ್ಟಾರೆ ಘಟನೆಯಲ್ಲಿ ಸಿಬಿಐ ತಂಡದ ವಾಹನ ಚಾಲಕನಿಗೆ ತೀವ್ರವಾಗಿ ಥಳಿಸಲಾಗಿದೆ. ಸಿಬಿಐ ತಂಡ ಜತೆಗಿದ್ದ ನಾವಡ ಜಿಲ್ಲಾ ಪೊಲೀಸ್ ತಂಡ ಮೇಲೂ ದಾಳಿ ನಡೆಸಲಾಗಿದೆ. ಬಳಿಕ ಸಿಬಿಐ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಡೆದಿದ್ದೇನು?: ಸಿಬಿಐ ತಂಡವು ಮುರ್ಹೆನಾದ ಕಾಸಿಯಾಡಿಹ್ ಗ್ರಾಮದ ನಿವಾಸಿ ಫೂಲ್‌ಚಂದ್ ಪ್ರಸಾದ್ ಮತ್ತು ಪತ್ನಿ ಬಬಿತಾ ದೇವಿ ಮನೆಯ ಮೇಲೆ ದಾಳಿ ಮಾಡಿದ ವೇಳೆ ಪರಿಶೀಲನೆ ಬಳಿಕ ಹಿಂತಿರುಗುತ್ತಿತ್ತು. ಈ ಸಮಯದಲ್ಲಿ ಕುಟುಂಬ ಸದಸ್ಯರು ಮತ್ತು ಸುಮಾರು 200-300 ಜನರು ಜಮಾಯಿಸಿ ಸಿವಿಲ್ ಡ್ರೆಸ್‌ನಲ್ಲಿದ್ದ ಸಿಬಿಐ ತಂಡವನ್ನು ಸುತ್ತುವರೆದಿದ್ದಾರೆ. ಅಲ್ಲದೇ, ಇವರನ್ನು ನಕಲಿ ಅಧಿಕಾರಿಗಳು ಎಂದು ಜನರು ಕರೆದಿದ್ದಾರೆ.