ಪಾಟ್ನಾ (ಬಿಹಾರ):ಆರ್‌ಜೆಡಿ - ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡು ಬಿಜೆಪಿ ಜೊತೆಗೆ ಕೈ ಜೋಡಿಸಿ ಹೊಸ ಸರ್ಕಾರ ರಚಿಸಿಕೊಂಡಿರುವ ಸಿಎಂ ನಿತೀಶ್ಕುಮಾರ್ ಇಂದು ಬಹುಮತ ಸಾಬೀತು ಪಡಿಸಬೇಕಿದ್ದು, ವಿಧಾನಸಭೆ ಅಧಿವೇಶನ ಆರಂಭವಾಗಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಮೂವರು ಆರ್‌ಜೆಡಿ ಶಾಸಕರು ಆಡಳಿತಾರೂಢ ಪಕ್ಷಗಳ ಸಾಲಿನಲ್ಲಿ ಕುಳಿತಿದ್ದಾರೆ. ಇದು ವಿಪಕ್ಷಗಳಿಗೆ ಭಾರಿ ಮುಜುಗರ ತಂದಿದೆ.
ವಿಶ್ವಾಸಮತ ಪರೀಕ್ಷೆ ಮೇಲಿನ ಚರ್ಚೆ ಆರಂಭವಾಗಿದೆ. ಇದೇ ವೇಳೆ, ಮೂವರು ಆರ್‌ಜೆಡಿ ಶಾಸಕರು ಆಡಳಿತ ಪಕ್ಷಗಳ ಸಾಲಿನಲ್ಲಿ ಕುಳಿತಿರುವ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ಜೊತೆಗೆ ಅವರ ಮತವನ್ನು ಅಮಾನ್ಯ ಮಾಡಬೇಕು ಎಂದು ಆಗ್ರಹಿಸುತ್ತಿವೆ. ಬಿಜೆಪಿ ಮತ್ತು ಜೆಡಿಯು ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡುತ್ತಿವೆ. ಸಂವಿಧಾನದ ನೀತಿಗಳನ್ನೇ ಗಾಳಿಗೆ ತೂರಿವೆ ಎಂದು ವಿಪಕ್ಷಗಳ ನಾಯಕರು ಆರೋಪಿಸುತ್ತಿದ್ದಾರೆ.
ಆರ್‌ಜೆಡಿ ಶಾಸಕರಾದ ಚೇತನ್ ಆನಂದ್, ನೀಲಂ ದೇವಿ ಮತ್ತು ಪ್ರಹ್ಲಾದ್ ಯಾದವ್ ಅವರು ಆಡಳಿತ ಪಕ್ಷಗಳ ಸಾಲಿನಲ್ಲಿ ಕುಳಿತವರು. ಅಧಿವೇಶನ ಆರಂಭದಲ್ಲೇ ಸ್ಪೀಕರ್ ಮತ್ತು ಆರ್‌ಜೆಡಿ ನಾಯಕ ಅವಧ್ ಬಿಹಾರಿ ಚೌಧರಿ ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಯಿತು.