ಪಾಟ್ನಾ(ಬಿಹಾರ):ಬಿಹಾರದಲ್ಲಿ ರಾಜಕೀಯ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆಯುತ್ತಿವೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಣ ಎನ್‌ಡಿಎ ಜೊತೆ ಮತ್ತೆ ಕೈಜೋಡಿಸುತ್ತಿದೆ. ಇಂದು ಬೆಳಿಗ್ಗೆ ರಾಜಭವನಕ್ಕೆ ತೆರಳಿರುವ ನಿತೀಶ್ ಕುಮಾರ್ ಅವರು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅವರನ್ನು ಭೇಟಿ ಮಾಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇದರೊಂದಿಗೆ ಬಿಜೆಪಿ ಮತ್ತು ಜೆಡಿಯು ಶಾಸಕರ ಬೆಂಬಲದೊಂದಿಗೆ ಅವರು ಬಿಹಾರದಲ್ಲಿ ಮತ್ತೆ ಹೊಸ ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಇಂದು ಸಂಜೆ ನಿತೀಶ್ ಪ್ರಮಾಣ ವಚನ: ಜೆಡಿಯು ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಇಂದು ಸಂಜೆ 4 ಗಂಟೆಯ ಸುಮಾರಿಗೆ ಬಿಜೆಪಿ ಬೆಂಬಲದೊಂದಿಗೆ ಮತ್ತೊಮ್ಮೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವರು. ಈ ಮೂಲಕ ಒಂಬತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ಕೈಗೊಳ್ಳಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಎಲ್‌ಜೆಪಿಆರ್ ಅಧ್ಯಕ್ಷ ಚಿರಾಗ್ ಪಾಸ್ವಾನ್ ಮತ್ತು ಇತರ ಮಿತ್ರಪಕ್ಷಗಳ ಅಧ್ಯಕ್ಷರುಗಳು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಮ್ಯಾಜಿಕ್ ನಂಬರ್ 127: ಜೆಡಿಯು 45, ಬಿಜೆಪಿಯ 78, ಹಿಂದೂಸ್ತಾನಿ ಅವಾಮ್ ಮೋರ್ಚಾದ 4 ಮತ್ತು ಒಬ್ಬ ಪಕ್ಷೇತರ ಶಾಸಕ ಸೇರಿದಂತೆ ಒಟ್ಟು 128 ಶಾಸಕರ ಬೆಂಬಲ ಪತ್ರವನ್ನು ನಿತೀಶ್ ಕುಮಾರ್ ರಾಜ್ಯಪಾಲರಿಗೆ ಹಸ್ತಾಂತರಿಸಲಿದ್ದಾರೆ.