ಪಾಟ್ನಾ(ಬಿಹಾರ):ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇದರ ಮಧ್ಯೆ, ಉತ್ತರ ಪ್ರದೇಶದಲ್ಲಿ ಎಂಜಿನಿಯರ್ನ ಅಂತ್ಯಸಂಸ್ಕಾರ ಬುಧವಾರ ನಡೆದಿದೆ. ಆತನ ಸೂಚನೆಯಂತೆ ಕುಟುಂಬವು ನ್ಯಾಯಕ್ಕಾಗಿ ಚಿತಾಭಸ್ಮ ಹಿಡಿದು ಬಿಹಾರದಲ್ಲಿರುವ ಕಿರುಕುಳ ನೀಡಿದ ಆರೋಪಿತ ಪತ್ನಿಯ ಮನೆಗೆ ತೆರಳಿದೆ.
ಕುಸಿದು ಬಿದ್ದ ತಾಯಿ:"ನನ್ನ ಮಗುವಿಗೆ ಸಾಕಷ್ಟು ಚಿತ್ರಹಿಂಸೆ ನೀಡಲಾಗಿದೆ. ಆತ ವಿಪರೀತ ಕಿರುಕುಳ ಅನುಭವಿಸಿದ್ದಾನೆ. ಮಗನಿಗೆ ನ್ಯಾಯ ಕೊಡಿಸಿ. ನನಗೆ ವೃದ್ಧಾಪ್ಯದ ಆಸರೆ ಇಲ್ಲವಾಗಿದೆ. ಕಿರುಕುಳ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಬಿಕ್ಕಿ ಬಿಕ್ಕಿ ಅತ್ತು ಅತುಲ್ ಸುಭಾಷ್ ಅವರ ತಾಯಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದರು.
"ಚಿತ್ರಹಿಂಸೆ ಕೂಡ ಕೊಲೆಯಾಗಿದೆ. ನಮಗೆ ನ್ಯಾಯ ಬೇಕು. ನನ್ನ ಮಗನಿಗೆ ನ್ಯಾಯ ಸಿಗಬೇಕು. ಸರ್ಕಾರದಿಂದ ಈವರೆಗೂ ಯಾವುದೇ ಭರವಸೆ ಸಿಕ್ಕಿಲ್ಲ. ಇದು ಆತ್ಮಹತ್ಯೆಯಲ್ಲ, ಕೊಲೆ. ಮಗನಿಗೆ ಮಾನಸಿಕ ಕಿರುಕುಳ ನೀಡಿ ಹತ್ಯೆ ಮಾಡಲಾಗಿದೆ" ಎಂದು ತಂದೆ ಪವನ್ ಕುಮಾರ್ ಆರೋಪಿಸಿದರು.
ಡೆತ್ನೋಟ್ನಲ್ಲಿ ಕಿರುಕುಳ, ನ್ಯಾಯದ ನಿರೀಕ್ಷೆ:ಮೂಲತಃ ಉತ್ತರ ಪ್ರದೇಶದ ಟೆಕ್ಕಿ ಅತುಲ್ ಸುಭಾಷ್ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದರು. ತನಗೆ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಡಿಸೆಂಬರ್ 9ರಂದು ಮಾರತ್‌ಹಳ್ಳಿಯ ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಮಾರು 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದರು.