ಕಂಕೇರ್, ಛತ್ತೀಸ್ಗಢ:ಕರಡಿ ದಾಳಿಗೆ ತಂದೆ ಹಾಗೂ ಮಗ ಸಾವನ್ನಪ್ಪಿ, ಇನ್ನಿಬ್ಬರು ಗಾಯಗೊಂಡಿರುವ ಘಟನೆ ಛತ್ತೀಸ್ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ.
ಅರಣ್ಯಾಧಿಕಾರಿಗಳ ಪ್ರಕಾರ, ಕೋರಾರ್ ಅರಣ್ಯ ವ್ಯಾಪ್ತಿಯ ಡೊಂಗರಕಟ್ಟೆ ಗ್ರಾಮದ ಬಳಿಯ ಬೆಟ್ಟದಲ್ಲಿ ಶನಿವಾರ ಈ ಘಟನೆ ನಡೆದಿದೆ. ಕಟ್ಟಿಗೆ ಸಂಗ್ರಹಿಸಲು ಕಾಡಿಗೆ ಹೋಗಿದ್ದವರ ಮೇಲೆ ಕರಡಿ ದಾಳಿ ಮಾಡಿದೆ.
ಸುಕಲಾಲ್ ಡಾರೊ ಸ್ಥಳದಲ್ಲೇ ಸಾವನ್ನಪ್ಪಿದರೆ, ಕುರೇಟಿ ಗಂಭೀರವಾಗಿ ಗಾಯಗೊಂಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಾವನ್ನಪ್ಪಿದ್ದ ಸುಕಲಾಲ್ ಡಾರೊ ಅವರ ದೇಹವನ್ನು ತೆಗೆಯುತ್ತಿದ್ದ ಅವರ ತಂದೆ ಶಂಕರ್ ಡಾರೊ ಅವರ ಮೇಲೆ ಕರಡಿ ದಾಳಿ ಮಾಡಿದೆ. ಶಂಕರ್ ಡಾರೊ ಅವರು ಕೂಡ ಸಾವನ್ನಪ್ಪಿದ್ದಾರೆ. ಅಜ್ಜು ಕುರೇಟಿ (22) ಅವರ ಮೇಲೆ ಕರಡಿ ಮಾರಣಾಂತಿಕವಾಗಿ ದಾಳಿ ಮಾಡಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯಲ್ಲಿ ಅರಣ್ಯ ರಕ್ಷಕ ನಾರಾಯಣ್ ಯಾದವ್ ಕೂಡ ಗಾಯಗೊಂಡಿದ್ದಾರೆ ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.
ಕರಡಿಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಅರಣ್ಯ ಸಿಬ್ಬಂದಿಯನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದ್ದು, ಗ್ರಾಮಸ್ಥರು ಕಾಡಿಗೆ ಹೋಗದಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:4 ವರ್ಷದ ಬಾಲಕನ ಮೇಲೆರೆಗಿದ ರಾಟ್ವೈಲರ್ ಸಾಕುನಾಯಿ; ರಕ್ಷಿಸಲು ಹೋದ ತಂದೆಗೂ ಗಾಯ