ನಾಗಾಂವ್ (ಅಸ್ಸಾಂ):ಬಾಂಗ್ಲಾದೇಶದ ಆತಂಕಕಾರಿ ಪರಿಸ್ಥಿತಿಯ ನಡುವೆಯೇ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬಾಂಗ್ಲಾದೇಶದ ಪ್ರಜೆಯೊಬ್ಬ ಬಿಎಸ್ಎಫ್ ಸಿಬ್ಬಂದಿಗೆ 500 ರೂಪಾಯಿ ಲಂಚ ನೀಡಿ ಅಸ್ಸಾಂ ಗಡಿ ಪ್ರವೇಶಿಸಿದ ಘಟನೆ ವರದಿಯಾಗಿದೆ.
ನಾಗಾಂವ್ ಜಿಲ್ಲಾ ಪೊಲೀಸರ ಕೈಗೆ ಸಿಕ್ಕಿಬಿದ್ದ ಬಾಂಗ್ಲಾದೇಶದ ಪ್ರಜೆಯೊಬ್ಬ, ಬಿಎಸ್ಎಫ್ ಸಿಬ್ಬಂದಿಗೆ ಹಣ ಕೊಟ್ಟು ಗಡಿ ದಾಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಾಂಗ್ಲಾದೇಶಿ ನಿವಾಸಿಯೊಬ್ಬ ಬಿಎಸ್ಎಫ್ ಸಿಬ್ಬಂದಿಗೆ ಕೇವಲ 500 ರೂ. ಲಂಚ ನೀಡುವ ಮೂಲಕ ದವ್ಕಿ ಗಡಿಯ ಮಾರ್ಗವಾಗಿ ಅಸ್ಸಾಂ ಪ್ರವೇಶಿಸಿದ್ದಾನೆ.
ಬಾಂಗ್ಲಾದೇಶದ ಸಿಲ್ಹೆತ್ ಜಿಲ್ಲೆಯ ನಿವಾಸಿ ಹುಮಾಯೂನ್ ಕಬೀರ್ ಎಂಬಾತನನ್ನು ನಾಗಾಂವ್ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ. ಆಗಸ್ಟ್ 4ರಂದು ಬಿಎಸ್‌ಎಫ್ ಸಿಬ್ಬಂದಿಗೆ 500 ರೂಪಾಯಿ ಲಂಚ ನೀಡಿ ದವ್ಕಿ ಗಡಿ ಮೂಲಕ ಅಸ್ಸಾಂ ಪ್ರವೇಶಿಸಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಹುಮಾಯೂನ್ ಅಕ್ರಮವಾಗಿ ಅಸ್ಸಾಂಗೆ ಪ್ರವೇಶಿಸಿ ನಾಗಾವ್‌ನ ಗೇರುವತಿ ಪ್ರದೇಶದಲ್ಲಿ ತಂಗಿದ್ದ ಎಂದು ನಾಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಸ್ವಪ್ನನೀಲ್ ದೇಕಾ ಹೇಳಿದ್ದಾರೆ.
ಆಘಾತಕಾರಿ ಘಟನೆ ಬಹಿರಂಗವಾಗಿರುವ ಹಿನ್ನೆಲೆ ಅಸ್ಸಾಂ-ಬಾಂಗ್ಲಾದೇಶದ ಗಡಿಯ ದುರ್ಬಲತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಅಸ್ಸಾಂಗೆ ಅಕ್ರಮ ಪ್ರವೇಶಕ್ಕೆ ಅನುವು ಮಾಡಿಕೊಡಲು ಬಿಎಸ್ಎಫ್ ಸಿಬ್ಬಂದಿಗೆ ಲಂಚ ನೀಡಬಹುದು ಎಂಬುದು ಗಂಭೀರ ವಿಷಯವಾಗಿದೆ. ಈ ಘಟನೆಯಿಂದ ಅಸ್ಸಾಂಗೆ ಅಕ್ರಮ ಪ್ರವೇಶವನ್ನು ತಡೆಗಟ್ಟಲು ಕಠಿಣ ಗಡಿ ಭದ್ರತಾ ಕ್ರಮಗಳ ಅಗತ್ಯವಿದೆ ಎನ್ನುವುದನ್ನು ಎತ್ತಿ ತೋರಿಸಿದೆ. ಆರೋಪಿಯಿಂದ ಮೊಬೈಲ್ ಫೋನ್ ಹಾಗೂ ಎರಡು ಸಿಮ್ ಕಾರ್ಡ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಲಂಚ ಪಡೆದು ಅಕ್ರಮವಾಗಿ ಗಡಿ ದಾಟಲು ಅವಕಾಶ ನೀಡಿದವರ ವಿರುದ್ಧ ಸಾರ್ವಜನಿಕರು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಇಲ್ಲಿ ಭಾರತದ ಮೊದಲ 24/7 ಧಾನ್ಯಗಳ ಎಟಿಎಂ ಅನಾವರಣ: ಇದು ಹೇಗೆ ಕಾರ್ಯನಿರ್ವಹಿಸಲಿದೆ ಗೊತ್ತಾ? - Indias first 24X7 Grains ATM