ನವದೆಹಲಿ:ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರ ಮಂಗಳವಾರ ಕರೆದಿರುವ ಸರ್ವಪಕ್ಷಗಳ ಸಭೆಯಲ್ಲಿ ಉಭಯ ಸದನಗಳ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ (ರಾಜ್ಯಸಭೆ) ಮತ್ತು ರಾಹುಲ್ ಗಾಂಧಿ (ಲೋಕಸಭೆ) ಭಾಗವಹಿಸಿದರು.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಪ್ರತಿಭಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿ-130 ಹರ್ಕ್ಯುಲಸ್ ಸೇನಾ ವಿಮಾನದಲ್ಲಿ ನವದೆಹಲಿ ಬಳಿಯ ಹಿಂಡನ್ ಏರ್ ಬೇಸ್‌ಗೆ ಬಂದಿಳಿದಿದ್ದಾರೆ. ಇಂದಿನ ಸಭೆಯಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪರಿಸ್ಥಿತಿ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ಢಾಕಾ ಟ್ರಿಬ್ಯೂನ್‌ನ ಪ್ರಕಾರ, ಸೋಮವಾರ ಬಾಂಗ್ಲಾದೇಶದಲ್ಲಿ ಪೊಲೀಸ್ ಗುಂಡಿನ ದಾಳಿ, ಗುಂಪು ಥಳಿತ ಮತ್ತು ಬೆಂಕಿ ಹಚ್ಚುವಿಕೆಯೊಂದಿಗೆ ಅಶಾಂತಿಯ ಪರಿಸ್ಥಿತಿಯಲ್ಲಿ ಕನಿಷ್ಠ 135 ಜನರು ಮೃತಪಟ್ಟಿದ್ದಾರೆ. ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆ ಮೂಲಗಳನ್ನು ಉಲ್ಲೇಖಿಸಿ ದ ಡೈಲಿ ಪ್ರೋಥೋಮ್ ಅಲೋ ಪತ್ರಿಕೆ, ಗುಂಡೇಟಿನ ಗಾಯಗೊಂಡವರು ಸೇರಿ ಒಟ್ಟು 500 ಗಾಯಳುಗಳನ್ನು ಆಸ್ಪತ್ರೆಗೆ ಕರೆತರಲಾಗಿದೆ. 70 ಮಂದಿಗೆ ಗಂಭೀರ ಗಾಯಗಾಳಾಗಿವೆ ಎಂದು ವರದಿ ಮಾಡಿದೆ.