ಢಾಕಾ(ಬಾಗ್ಲಾದೇಶ): ಕಳೆದ ವರ್ಷದ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಅವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ ನಂತರ ಉಭಯ ದೇಶಗಳ ನಡುವೆ ಸಂಬಂಧ ಹದಗೆಟ್ಟಿದ್ದು, ಈ ನಡುವೆಯೂ ಭಾರತ ಬಾಂಗ್ಲಾದೇಶಕ್ಕೆ ಎರಡನೇ ಬಾರಿಗೆ ಇದೀಗ ಸಾವಿರಾರು ಟನ್ ಅಕ್ಕಿ ಕಳುಹಿಸಿಕೊಟ್ಟಿದೆ. ಅಪಾರ ಪ್ರಮಾಣದ ಅಕ್ಕಿ ಹೊತ್ತ ಎರಡು ಹಡಗುಗಳು ಶನಿವಾರ ಬಾಂಗ್ಲಾದ ಮೊಂಗ್ಲಾ ಬಂದರು ತಲುಪಿದವು.
"ಎರಡು ಬೃಹತ್ ಗಾತ್ರದ ಹಡಗುಗಳು 16,400 ಟನ್ ಅಕ್ಕಿ ಹೊತ್ತು ಇಲ್ಲಿನ ಬಂದರು ತಲುಪಿವೆ" ಎಂದು ಢಾಕಾ ಟ್ರಿಬ್ಯೂನ್ ದಿನಪತ್ರಿಕೆ ವರದಿ ಮಾಡಿದೆ.
ಒಪ್ಪಂದದ ಪ್ರಕಾರ, ಬಾಂಗ್ಲಾದೇಶ ಭಾರತದಿಂದ 300,000 ಟನ್ ಅಕ್ಕಿ ಪಡೆಯಲಿದೆ. ಮೊಂಗ್ಲಾ ಆಹಾರ ನಿಯಂತ್ರಕರ ಕಚೇರಿ ನೀಡಿದ ಮಾಹಿತಿಯಂತೆ, ಈ ಪೈಕಿ ಶೇ.40ರಷ್ಟು ಅಕ್ಕಿಯನ್ನು ಮೊಂಗ್ಲಾ ಬಂದರಿನಲ್ಲಿ ಇಳಿಸಲಾಗುತ್ತದೆ. ಪನಾಮಾ ಧ್ವಜ ಹೊಂದಿರುವ ಬಿಎಂಸಿ ಆಲ್ಫಾ ಹಡಗು ಒಡಿಶಾದ ಧರ್ಮಾ ಬಂದರಿನಿಂದ 7,700 ಟನ್ ಅಕ್ಕಿ ಹೊತ್ತು ಬಂದರೆ, ಥಾಯ್ಲೆಂಡ್ ಧ್ವಜ ಹೊಂದಿದ ಎಂವಿ ಸೀ ಫಾರೆಸ್ಟ್ ಹಡಗು ಕೊಲ್ಕತ್ತಾ ಬಂದರಿನಿಂದ 8,700 ಟನ್ ಅಕ್ಕಿ ಸಾಗಿಸಿತು.
ಮುಕ್ತ ಟೆಂಡರ್ ಆಮದಿನ ಪೈಕಿ ಮೊದಲ ಸಾಗಣೆಯನ್ನು ಜನವರಿ 20ರಂದು ಬಾಂಗ್ಲಾದೇಶಕ್ಕೆ ರವಾನಿಸಲಾಗಿತ್ತು. ವಿಯೆಟ್ನಾಂ ಧ್ವಜ ಹೊಂದಿದ ಎಂವಿ ಪುಥಾನ್-36 ಹಡಗು 5,700 ಟನ್ ಅಕ್ಕಿ ಸಾಗಿಸಿದೆ ಎಂದು ವರದಿ ಹೇಳಿದೆ.
ಕೆಲ ದಿನಗಳ ಹಿಂದೆ, ಗಡಿ ಭದ್ರತಾ ಪಡೆಯ ಡೆರೆಕ್ಟರ್ ಜನರಲ್ ಮಟ್ಟದ ಅಧಿಕಾರಿಗಳ ಸಭೆಯಲ್ಲಿ, ಗಡಿ ಭದ್ರತೆಯ ವಿಚಾರವಾಗಿ ಉಭಯ ದೇಶಗಳ ನಡುವೆ ಇರುವ ಕೆಲವು "ಅಸಮ" ಒಪ್ಪಂದಗಳನ್ನು ರದ್ದುಗೊಳಿಸಲು ತಾನು ಬಯಸುತ್ತಿರುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಭಾರತಕ್ಕೆ ತಿಳಿಸಿತ್ತು.