ಚೆನ್ನೈ(ತಮಿಳುನಾಡು): ಅಯೋಧ್ಯೆಯಲ್ಲಿ ಇಂದು ಅದ್ಧೂರಿಯಾಗಿ ನಡೆದ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದವನ್ನು ಇಡೀ ದೇಶವೇ ಕಣ್ಣು ತುಂಬಿಕೊಂಡಿದೆ. ಶ್ರೀರಾಮ ಮಂದಿರ ಉದ್ಘಾಟನೆಗೆ ವಿವಿಧ ರಾಜ್ಯಗಳ ಸಂಗೀತ ವಾದ್ಯಗಳು ಮಂಗಳ ಧ್ವನಿ ಮೊಳಗಿಸಿವೆ. ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಬೇರೆ ಬೇರೆ ಊರುಗಳಿಂದ ಒಂದೊಂದು ವಿಶೇಷ ವಸ್ತುಗಳನ್ನು ಕಳುಹಿಸಲಾಗಿದೆ. ಹೀಗೆ ಅಯೋಧ್ಯೆಯ ರಾಮ ಮಂದಿರದಲ್ಲಿರುವ ಸೀತಾ ಮಾತೆಯ ವಿಗ್ರಹಕ್ಕೆ ಉಡಿಸಲೆಂದು ಚೆನ್ನೈನ ಸಾಂಪ್ರದಾಯಿಕ ನೈಸರ್ಗಿಕ ನಾರು ನೇಯ್ಗೆ ಗ್ರೂಪ್, ವಿಶೇಷವಾಗಿ ಬಾಳೆ ನಾರಿನಿಂದ ತಯಾರಿಸಿದಂತಹ ಸೀರೆಯನ್ನು ವಿಮಾನ ಮೂಲಕ ಅಯೋಧ್ಯೆಗೆ ಕಳುಹಿಸಿದೆ.
20 ಅಡಿ ಉದ್ದ ಮತ್ತು ನಾಲ್ಕು ಅಡಿ ಅಗಲದ ಬಾಳೆ ನಾರಿನ ಸೀರೆಯನ್ನು ಸಂಪೂರ್ಣವಾಗಿ ಪ್ರಕೃತಿಯಿಂದ ದೊರೆತ ವಸ್ತುಗಳಿಂದಲೇ ತಯಾರಿಸಿರುವುದು ವಿಶೇಷ. ಈ ವಿಶೇಷ ನೈಸರ್ಗಿಕ ಬಾಳೆ ನಾರಿನ ಸೀರೆಯಲ್ಲಿ, ಅಯೋಧ್ಯೆ ರಾಮಮಂದಿರ ಮತ್ತು ರಾಮ ಬಾಣ ಬಿಡುತ್ತಿರುವಂತಹ ಚಿತ್ರವನ್ನು ರಚಿಸಲಾಗಿದೆ.
ನಾಟಿಯ ನೆಸವ್ ಗ್ರೂಪ್ ಮುಖ್ಯಸ್ಥ ಶೇಖರ್ ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, "ಈ ನೇಯ್ಗೆ ಕೆಲಸ ಮಾಡುತ್ತಿರುವವರಲ್ಲಿ ನಾವು ಮೂರನೇ ತಲೆಮಾರಿನವರು. ಹಿಂದಿನ ಕಾಲದಲ್ಲಿ ಸೀರೆ ನೇಯಲು ಹತ್ತಿಯನ್ನು ಬಳಸುತ್ತಿದ್ದೆವು. ಆದರೆ ಈಗ ವಿವಿಧ ವಸ್ತುಗಳಿಂದ ಸೀರೆಗಳನ್ನು ನೇಯಲಾಗುತ್ತದೆ. ರಾಮಾಯಣದಲ್ಲಿ ರಾಮನ ಪರಮ ಭಕ್ತ ಹನುಮಂತನು ಸೀತೆಗೆ ಬಾಳೆಹಣ್ಣಿನ ಸೀರೆಯನ್ನು ನೀಡಿದ ಉಲ್ಲೇಖವಿದೆ. ಹತ್ತಿಯಿಂದ ಸೀರೆ ನೇಯುತ್ತಿದ್ದ ನಾವು ನಂತರ ನೈಸರ್ಗಿಕವಾಗಿ ದೊರೆಯುವ ಬಾಳೆ ಸಸಿಗಳ ನಾರಿನಿಂದ ಸೀರೆ ತಯಾರಿಸುವುದನ್ನು ಕಲಿತು, ಇದೀಗ ಸಂಪೂರ್ಣವಾಗಿ ಕೈಯಿಂದಲೇ ಸೀರೆ ನೇಯುತ್ತಿದ್ದೇವೆ." ಎಂದು ತಿಳಿಸಿದರು.
ಕಳೆದ 12 ವರ್ಷಗಳಿಂದ ಹಣ್ಣಿನ ತ್ಯಾಜ್ಯದಿಂದ ಬಣ್ಣ ಮತ್ತು ಬಿದಿರು, ಬಾಳೆಗಿಡ, ತೆಂಗಿನಕಾಯಿ ಮುಂತಾದವುಗಳ ನಾರು ಬಳಸಿ ಸೀರೆಗಳನ್ನು ತಯಾರಿಸುತ್ತಿದ್ದೇವೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಏನಾದರೂ ಕೊಡಬೇಕು ಎಂದು ಕಳೆದ ಎರಡ್ಮೂರು ತಿಂಗಳುಗಳಿಂದ ಯೋಚಿಸುತ್ತಿದ್ದೆವು. ಆಗ ನ್ಯಾಚುರಲ್ ಫೈಬರ್ ವೀಯಿಂಗ್ ಗ್ರೂಪ್ನ ಮಹಿಳೆಯರೊಂದಿಗೆ ಸಮಾಲೋಚಿಸಿ, ರಾಮಮಂದಿರದಲ್ಲಿ ಇರಿಸಲಾಗಿರುವ ಸೀತಾದೇವಿ ಪ್ರತಿಮೆಗೆ ನೈಸರ್ಗಿಕ ನಾರಿನ ಸೀರೆ ನೀಡಲು ನಿರ್ಧರಿಸಲಾಯಿತು. ಈ ಕಾರಣಕ್ಕಾಗಿಯೇ ಕಳೆದ 10 ದಿನಗಳಿಂದ ಹಗಲಿರುಳು ಬಾಳೆ ನಾರುಗಳನ್ನು ಸಿದ್ಧಪಡಿಸಿ, ಸುಮಾರು 15 ದಿನಗಳಲ್ಲಿ ರಾಮಮಂದಿರದ ಚಿತ್ರವಿರುವ ನೈಸರ್ಗಿಕ ಶೈಲಿಯ ಸೀರೆಯನ್ನು ನೇಯ್ದು, ಸೀರೆಯ ಮೇಲೆ ರಾಮ ಬಾಣ ಬಿಡುತ್ತಿರುವ ಚಿತ್ರವನ್ನೂ ಬಿಡಿಸಿದೆವು. ಈ ಸೀರೆಯನ್ನು ಸಂಪೂರ್ಣವಾಗಿ ಬಾಳೆ ನಾರು ಮತ್ತು ರೇಷ್ಮೆಯಿಂದ ತಯಾರಿಸಲಾಗಿದೆ. 4 ಅಡಿ ಅಗಲ ಮತ್ತು 20 ಅಡಿ ಉದ್ದದ ಈ ಸೀರೆಗೆ ಯಾವುದೇ ಕೆಮಿಕಲ್ ಬಣ್ಣವನ್ನು ಬೆರೆಸದೆ ನೈಸರ್ಗಿಕವಾಗಿ ತಯಾರಿಸಲಾಗಿದೆ" ಎಂದು ಹೇಳಿದರು.