ಕರ್ನಾಟಕ

karnataka

ETV Bharat / bharat

'228 ಕೆಜಿ ಚಿನ್ನ ನಾಪತ್ತೆ ಬಗ್ಗೆ ಸಾಕ್ಷ್ಯ ಇದ್ರೆ ಕೋರ್ಟ್‌ಗೆ ಹೋಗಿ': ಕೇದಾರನಾಥ ದೇಗುಲದ ಅಧ್ಯಕ್ಷರ ಸವಾಲು - Kedarnath Gold Issue - KEDARNATH GOLD ISSUE

ದೆಹಲಿಯಲ್ಲಿ ಕೇದಾರನಾಥ ದೇವಾಲಯದ ನಿರ್ಮಾಣದ ವಿಷಯ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ದೇವಸ್ಥಾನದಲ್ಲಿ 228 ಕೆಜಿ ಚಿನ್ನ ಕಳ್ಳತನವಾದ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ.

KEDARNATH GOLD ISSUE
ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ (IANS)

By ANI

Published : Jul 17, 2024, 12:58 PM IST

Updated : Jul 17, 2024, 1:13 PM IST

ಡೆಹ್ರಾಡೂನ್(ಉತ್ತರಾಖಂಡ): ಪ್ರಸಿದ್ಧ ಹಿಂದೂ ಧಾರ್ಮಿಕ ಕ್ಷೇತ್ರ ಕೇದಾರನಾಥ ದೇವಸ್ಥಾನದಲ್ಲಿ 228 ಕೆಜಿ ಚಿನ್ನ ಕಳ್ಳತನವಾಗಿದೆ ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರ ಗಂಭೀರ ಆರೋಪಕ್ಕೆ ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಬುಧವಾರ ಪ್ರತಿಕ್ರಿಯಿಸಿದ್ದಾರೆ.

''ಕೇದಾರನಾಥ ಧಾಮದಲ್ಲಿ ಚಿನ್ನ ನಾಪತ್ತೆಯಾಗಿರುವ ಬಗ್ಗೆ ಸ್ವಾಮಿ ಅವಿಮುಕ್ತೇಶ್ವರಾನಂದರ ಹೇಳಿಕೆ ದುರದೃಷ್ಟಕರ. ಇದರ ಬಗ್ಗೆ ವಾಸ್ತವಾಂಶವನ್ನು ಅವರು ತಿಳಿಸಬೇಕೆಂದು ಮನವಿಯ ಜೊತೆಗೆ ಸವಾಲು ಹಾಕುತ್ತೇನೆ'' ಎಂದು ಹೇಳಿದ್ದಾರೆ.

''ಸ್ವಾಮಿ ಅವಿಮುಕ್ತೇಶ್ವರಾನಂದರು ಹೇಳಿಕೆಗಳನ್ನು ನೀಡುವ ಬದಲು ಸಕ್ಷಮ ಪ್ರಾಧಿಕಾರವನ್ನು ಸಂಪರ್ಕಿಸಿ ತನಿಖೆಗೆ ಒತ್ತಾಯಿಸಬೇಕು. ಅಲ್ಲದೇ, ಸಾಕ್ಷ್ಯಾಧಾರಗಳಿದ್ದರೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಆದರೆ, ಕೇದಾರನಾಥ ಧಾಮದ ಘನತೆಗೆ ಧಕ್ಕೆ ತರುವ ಅಥವಾ ವಿವಾದ ಸೃಷ್ಟಿಸುವ ಹಕ್ಕು ಶಂಕರಾಚಾರ್ಯರಿಗಿಲ್ಲ. ಅವರು ಕೇವಲ ಪ್ರತಿಭಟನೆ, ವಿವಾದಗಳನ್ನು ಸೃಷ್ಟಿಸಲು ಮತ್ತು ಕಾಂಗ್ರೆಸ್‌ನ ಅಜೆಂಡಾವನ್ನು ಹೆಚ್ಚಿಸಲು ಈ ರೀತಿ ಮಾಡುತ್ತಿದ್ದರೆ, ತುಂಬಾ ದುರದೃಷ್ಟಕರ'' ಎಂದರು.

ಅವಿಮುಕ್ತೇಶ್ವರಾನಂದರು ಹೇಳಿದ್ದೇನು?: ದೆಹಲಿಯಲ್ಲಿ ಕೇದಾರನಾಥ ದೇವಾಲಯದ ನಿರ್ಮಾಣದ ವಿಷಯವು ಈಗ ಚರ್ಚೆಗೆ ಗ್ರಾಸವಾಗಿದೆ. ಇದೇ ವಿಷಯವಾಗಿ ಜುಲೈ 15ರಂದು ಪ್ರತಿಕ್ರಿಯಿಸಿದ್ದ ಸ್ವಾಮಿ ಅವಿಮುಕ್ತೇಶ್ವರಾನಂದ, ''ಕೇದಾರನಾಥದಲ್ಲಿ 228 ಕೆಜಿ ಚಿನ್ನ ನಾಪತ್ತೆಯಾಗಿದೆ. ಈ ಹಗರಣದ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ?. ಅಲ್ಲಿ ಹಗರಣ ಮಾಡಿ ಈಗ ದೆಹಲಿಯಲ್ಲಿ ಕೇದಾರನಾಥ ಕಟ್ಟುತ್ತಾರಾ?, ತದನಂತರ ಮತ್ತೊಂದು ಹಗರಣ ಬರುತ್ತದೆ. ಕೇದಾರನಾಥದಿಂದ 228 ಕೆಜಿ ಚಿನ್ನ ನಾಪತ್ತೆ ಬಗ್ಗೆ ಯಾವುದೇ ವಿಚಾರಣೆ ಪ್ರಾರಂಭವಾಗಿಲ್ಲ. ಇದಕ್ಕೆ ಯಾರು ಹೊಣೆ'' ಎಂದು ಪ್ರಶ್ನಿಸಿದ್ದರು.

ಮುಂದುವರೆದು, ''ಸಾಂಕೇತಿಕ ಕೇದಾರನಾಥ ಇರಲು ಸಾಧ್ಯವಿಲ್ಲ. ಶಿವಪುರಾಣದಲ್ಲಿ 12 ಜ್ಯೋತಿರ್ಲಿಂಗಗಳನ್ನು ಹೆಸರು ಮತ್ತು ಸ್ಥಳದೊಂದಿಗೆ ಉಲ್ಲೇಖಿಸಲಾಗಿದೆ. ಕೇದಾರನಾಥದ ವಿಳಾಸವು ಹಿಮಾಲಯದಲ್ಲಿರುವಾಗ ಅದು ದೆಹಲಿಯಲ್ಲಿ ಹೇಗೆ ಇರುತ್ತದೆ?. ಇದರ ಹಿಂದೆ ರಾಜಕೀಯ ಕಾರಣವಿದೆ. ರಾಜಕೀಯ ವ್ಯಕ್ತಿಗಳು ನಮ್ಮ ಧಾರ್ಮಿಕ ಸ್ಥಳಗಳನ್ನು ಪ್ರವೇಶಿಸುತ್ತಿದ್ದಾರೆ. ಕೇದಾರನಾಥದಿಂದ ನಾಪತ್ತೆಯಾದ ಚಿನ್ನಕ್ಕೆ ಯಾರು ಹೊಣೆ?. ಈಗ ಅವರೇ ದೆಹಲಿಯಲ್ಲಿ ಕೇದಾರನಾಥ ನಿರ್ಮಿಸುವುದಾಗಿ ಹೇಳುತ್ತಿದ್ದಾರೆ'' ಎಂದೂ ಆಕ್ರೋಶ ವ್ಯಕ್ತಪಡಿಸಿದ್ದರು.

ಮಂದಿರ ಆರ್ಥಿಕ ಕೇಂದ್ರವಲ್ಲ:ಇದೇ ವಿಚಾರಗಾಗಿ ಜುಲೈ 16ರಂದು ಮಾತನಾಡಿದ್ದ ಅವರು, ''ಕೇದಾರನಾಥದ ಚಿನ್ನದ ಬಗ್ಗೆ ತನಿಖೆ ಬೇಡಿಕೆಯನ್ನು ಕಮಿಷನರ್‌ ಮುಂದೆ ಮಂಡಿಸಲಾಗಿತ್ತು. ಆದರೆ, ಅವರು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಲಿಲ್ಲ. ಈ ಹಿಂದೆ 320 ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಹೇಳಲಾಗಿದ್ದು, ನಂತರ 228ಕ್ಕೆ ಇಳಿಸಿದರು. ನಂತರ 36, 32, 27 ಕೆಜಿ ಆಯಿತು. ಇಲ್ಲಿ 320, 228, 36, 32 ಅಥವಾ 27 ಎಂಬ ಸಂಖ್ಯೆ ಮುಖ್ಯವಲ್ಲ. ಆ ಚಿನ್ನ ಎಲ್ಲಿಗೆ ಹೋಯಿತು?, ಚಿನ್ನವು ಹಿತ್ತಾಳೆಯಾಗಿದ್ದೇ ಹೇಗೆ?, ತನಿಖೆಗೆ ಆಗ್ರಹಿಸಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಅವರು ಸರಿಯಾಗಿ ತನಿಖೆ ನಡೆಸಿಲ್ಲ. ದೇವಸ್ಥಾನದಿಂದ ಚಿನ್ನ ನಾಪತ್ತೆಯಾಗಲು ಕಾರಣವೇನು? ಇದೊಂದು ದೊಡ್ಡ ಹಗರಣ'' ಎಂದು ಪುನರುಚ್ಚರಿಸಿದ್ದಾರೆ.

ಅಲ್ಲದೇ, ದೆಹಲಿಯಲ್ಲಿ ಕೇದಾರನಾಥ ದೇವಾಲಯದ ವಿಚಾರವನ್ನೂ ಮತ್ತೆ ಖಂಡಿಸಿದ ಅವರು, ''ದೆಹಲಿಯ ಕೇದಾರನಾಥ ಟ್ರಸ್ಟ್‌ನ ಜಾಹೀರಾತಿನಲ್ಲಿ 'ಕೇದಾರನಾಥ ಸ್ಥಳಾಂತರ' ಎಂದು ಬರೆಯಲಾಗಿದೆ. ಉತ್ತರಾಖಂಡದ ಸಿಎಂ ಧಾಮಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಂದರೆ ಕೇದಾರನಾಥ ಧಾಮಕ್ಕೆ ಪರ್ಯಾಯ ಎಂದು ಪ್ರಚಾರ ಮಾಡಲಾಗುತ್ತಿದೆ. ಇದು ಸ್ವೀಕಾರಾರ್ಹವಲ್ಲ, ಕೇದಾರನಾಥ ಧಾಮಕ್ಕೆ ಪರ್ಯಾಯವಾಗಿ ಕೇದಾರನಾಥ ಧಾಮ ಮಾತ್ರ. ಮಂದಿರವು ಆರ್ಥಿಕ ಕೇಂದ್ರವಲ್ಲ. ನೀವು ಕೇದಾರನಾಥ ಧಾಮವನ್ನು ಬದಲಾಯಿಸಲು ಸಾಧ್ಯವಿಲ್ಲ. ಕಾಶಿ ವಿಶ್ವನಾಥ ವಾರಣಾಸಿಯಲ್ಲಿದ್ದಾನೆ ಎಂದು ನಮಗೆ ಹೇಗೆ ಗೊತ್ತಾಯಿತು?, ಏಕೆಂದರೆ ಅದು ಶಾಸ್ತ್ರಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅದೇ ರೀತಿ ಶಾಸ್ತ್ರಗಳಲ್ಲಿ ಕೇದಾರವು ಹಿಮಾಲಯದಲ್ಲಿದೆ ಉಲ್ಲೇಖಿಸಲಾಗಿದೆ'' ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ ಜುಲೈ 18 ರಂದು ಮತ್ತೆ ಓಪನ್

Last Updated : Jul 17, 2024, 1:13 PM IST

ABOUT THE AUTHOR

...view details