ಗಂದೇರ್‌ಬಾಲ್ (ಜಮ್ಮು ಮತ್ತು ಕಾಶ್ಮೀರ):ಮಧ್ಯ ಕಾಶ್ಮೀರದ ಗಂದೇರ್‌ಬಾಲ್ ಜಿಲ್ಲೆಯಲ್ಲಿ ಆಯುಷ್ ಕೇಂದ್ರಗಳಿಂದ ಉಚಿತವಾಗಿ ಒದಗಿಸಿರುವ ಔಷಧಗಳು ಭಾರೀ ಪ್ರಮಾಣದಲ್ಲಿ ವ್ಯರ್ಥವಾಗುತ್ತಿರುವುದು ಬೆಳಕಿಗೆ ಬಂದಿದೆ.
ಇದಕ್ಕೆ ಸಾಕ್ಷಿಯಾಗಿ ಜಿಲ್ಲೆಯ ಮುಲ್ಲಾ ಶಾಹಿ ಬಾಗ್ ಪ್ರದೇಶದ ಆಯುಷ್ ಕೇಂದ್ರದ ಬಳಿಯಿರುವ ಕಸದ ರಾಶಿಯಲ್ಲಿ ಆಯುಷ್ ಔಷಧಿಗಳ ಮೂಟೆಗಳು ಪತ್ತೆಯಾಗಿವೆ. ಕಸದ ರಾಶಿಯಲ್ಲಿ ಪತ್ತೆಯಾಗಿರುವ ಕೆಲವು ಔಷಧಿಗಳ ಅವಧಿಯೇ ಮುಗಿದಿಲ್ಲ. ಆದರೆ ಬಹುತೇಕ ಔಷಧಿಗಳು ರೋಗಿಗಳಿಗೆ ಒದಗಿಸದೇ ಇರುವ ಕಾರಣ ಅವಧಿ ಮುಗಿದಿವೆ.
ರಾಷ್ಟ್ರೀಯ ಆಯುಷ್ ಮಿಷನ್ನ್ನು ಕೇಂದ್ರ ಸರ್ಕಾರವು 2014-15 ರಲ್ಲಿ ಪ್ರಾರಂಭಿಸಿತ್ತು. ಇದರ ಅಡಿಯಲ್ಲಿ ಗಂದೇರ್‌ಬಾಲ್ ಜಿಲ್ಲೆಯಲ್ಲಿ 23 ಆಯುಷ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ರೋಗಿಗಳಿಗೆ ಉಚಿತ ಔಷಧಿಗಳು ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತದೆ. ಆದರೆ ಈ ಯೋಜನೆಯಡಿಯಲ್ಲಿ ಸರಬರಾಜು ಮಾಡಲಾದ ಔಷಧಿಗಳು ವ್ಯರ್ಥವಾಗುತ್ತಿದ್ದು, ಆಯುಷ್ ಇಲಾಖೆಯ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರವನ್ನು ತೋರಿಸುತ್ತಿದೆ. ಇಷ್ಟು ಮೊತ್ತದ ಔಷಧಿಗಳನ್ನು ಬಳಕೆ ಮಾಡದೇ ಕಸದೊಂದಿಗೆ ವಿಲೇವಾರಿ ಮಾಡುತ್ತಿರುವ ಕಾರಣ ಅಥವಾ ಉದ್ದೇಶವೇನೆಂಬುದು ಸ್ಪಷ್ಟವಾಗಿಲ್ಲ. ಸಾಮಾನ್ಯವಾಗಿ ಅವಧಿ ಮೀರಿದ ಔಷಧಿಗಳನ್ನು ವಿಲೇವಾರಿ ಮಾಡಲು ಅನುಮತಿ ಮತ್ತು ನಿಯಮ ಇದೆ.