ಔರಂಗಾಬಾದ್ (ಬಿಹಾರ):"ಆಕೆ ಈ ವ್ಯವಸ್ಥೆ ಬದಲಿಸಲು ಬಯಸಿದ್ದಳು, ಸಮಾಜದಲ್ಲಿನ ಕೆಟ್ಟ ಪರಿಸ್ಥಿತಿಯನ್ನು ಸರಿ ದಾರಿಗೆ ತರಬೇಕು ಎಂದು ಕನಸು ಕಂಡಿದ್ದಳು. ಆದರೆ, ಅದೇ ವ್ಯವಸ್ಥೆ ಆಕೆಯನ್ನು ಬಲಿ ಪಡೆದುಕೊಂಡಿತು." ಇದು ದೆಹಲಿಯ ಕೋಚಿಂಗ್ ಸೆಂಟರ್ನಲ್ಲಿ ಮಳೆ ನೀರು ನುಗ್ಗಿ ಸಾವನ್ನಪ್ಪಿದ ಐಎಎಸ್ ಆಕಾಂಕ್ಷಿ ಬಿಹಾರದ ತಾನ್ಯಾ ಸೋನಿ ಅವರ ಕುಟುಂಬಸ್ಥರ ಅಳಲಾಗಿದೆ.
ತಾನ್ಯಾ ಅವರನ್ನು ಕಳೆದುಕೊಂಡ ಕುಟುಂಬದ ರೋಧನೆ ಕರುಳು ಕಿತ್ತು ಬರುವಂತಿದೆ. ಐಎಎಸ್ ಅಧಿಕಾರಿಯಾಗಬೇಕು ಎಂದು ಕನಸು ಕಂಡಿದ್ದ ಮಗಳು ಇನ್ನಿಲ್ಲ ಎಂಬುದು ಎಲ್ಲರನ್ನೂ ಧೃತಿಗೆಡಿಸಿದೆ. ಮುಂದೊಂದು ದಿನ ತಮ್ಮ ಮಗಳು ಅಧಿಕಾರಿಯಾಗಿ ಹದಗೆಟ್ಟ ವ್ಯವಸ್ಥೆಯನ್ನು ಸರಿ ಮಾಡುವ ದಿಟ್ಟೆಯಾಗುತ್ತಾಳೆ ಎಂದುಕೊಂಡವರಿಗೆ, ಅದೇ ಹಾಳಾದ ವ್ಯವಸ್ಥೆ ಭಾವಿ ಅಧಿಕಾರಿಣಿಯನ್ನು ಬಲಿ ಪಡೆದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ತಾನ್ಯಾ ಸೋನಿ ಅವರ ಕುಟುಂಬದಲ್ಲಿ ಆಕೆಯ ಸಾವು ಆಘಾತವನ್ನೇ ತಂದಿದೆ. ತಾನ್ಯಾ ಅವರ ಮೃತದೇಹ ದೆಹಲಿಯಿಂದ ಬಿಹಾರದ ಔರಂಗಾಬಾದ್‌ಗೆ ತಂದಾಗ ಕುಟುಂಬಸ್ಥರ ಆರ್ತನಾದ ಅಲ್ಲಿದ್ದ ಎಲ್ಲ ಹೃದಯಗಳನ್ನು ನಡುಗಿಸಿತ್ತು. ತಂದೆ ವಿಜಯ್ ಅವರು ಮಗಳ ಶವ ಕಂಡು ಕೊರಗುತ್ತಿದ್ದರು. ಮೊಮ್ಮಗಳ ಸಾವಿನಿಂದ ಅಜ್ಜ ಗೋಪಾಲ್ ಪ್ರಸಾದ್ ಅವರು ಕುಂತಲ್ಲೇ ಕುಸಿದಿದ್ದರು. ಹಿರಿವಯಸ್ಸಿನ ಜೀವ ತನ್ನ ಕಣ್ಣ ಮುಂದೆ ಪುಟ್ಟ ಪ್ರಾಣ ಹೋಗಿದ್ದನ್ನು ಕಂಡು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದರು.
ತಾಯಿಯ ಕಣ್ಣೀರ ಕೋಡಿ :ತಾನ್ಯಾ ಅವರ ತಾಯಿ ಬಬಿತಾ ಅವರು ಕಣ್ಣಲ್ಲಿ ನೀರು ಉಕ್ಕಿ ಬರುತ್ತಿತ್ತು. ಭುಜದೆತ್ತರ ಬೆಳೆದ ಮಗಳ ಶವ ಮನೆ ಮುಂದೆ ನೋಡಿ ಆಕೆಯ ಹೃದಯವೇ ಹೊಡೆದು ಹೋಗಿತ್ತು. ಸಹೋದರ ಕೂಡ ನಿರಂತರವಾಗಿ ಅಳುತ್ತಿದ್ದ. ಗ್ರಾಮದ ಜನರು, ಶಾಸಕರು ಸ್ಥಳಕ್ಕೆ ಆಗಮಿಸಿದ್ದರು.