ಸಂತ ಕಬೀರ್ ನಗರ (ಉತ್ತರ ಪ್ರದೇಶ): ಜಿಲ್ಲೆಯ ಗ್ರಾಮವೊಂದರಲ್ಲಿ ತಡರಾತ್ರಿ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದ ನಿಶಾದ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕ್ಯಾಬಿನೆಟ್ ಸಚಿವ ಸಂಜಯ್ ಕುಮಾರ್ ನಿಶಾದ್ ಮತ್ತು ಅವರ ಬೆಂಬಲಿಗರ ಮೇಲೆ ಅಪರಿಚಿತ ತಂಡವೊಂದು ಹಲ್ಲೆ ನಡೆಸಿದೆ. ಸಂಜಯ್ ನಿಶಾದ್ ಅವರ ಮೂಗಿಗೆ ಪೆಟ್ಟಾಗಿದ್ದು, ರಕ್ತ ಕಂಡು ಬೆಂಬಲಿಗರು ತಕ್ಷಣ ಅವರನ್ನು ಖಲೀಲಾಬಾದ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಸದ್ಯ ಅವರ ಮೂಗಿಗೆ ಬ್ಯಾಂಡೇಜ್ ಹಾಕಿದ್ದಾರೆ.
ಚಿಕಿತ್ಸೆ ಬಳಿಕ ಸಚಿವರು ಆಸ್ಪತ್ರೆ ಆವರಣದಲ್ಲಿಯೇ ಘಟನೆ ಖಂಡಿಸಿ ಧರಣಿ ಕುಳಿತರು. ಅವರ ಪುತ್ರ ಪ್ರವೀಣ್ ನಿಶಾದ್ ಸೇರಿದಂತೆ ಮೂರು ಪಕ್ಷದ ಶಾಸಕರು ಜಿಲ್ಲಾಸ್ಪತ್ರೆಗೆ ಆಗಮಿಸಿ ಹಲ್ಲೆಕೋರರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಮಾಹಿತಿ ಪಡೆದ ಎಸ್ಪಿ ಸತ್ಯಜಿತ್ ಗುಪ್ತಾ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಭಾನುವಾರ ತಡರಾತ್ರಿ ಪುತ್ರನ ಸಂಸದೀಯ ಕ್ಷೇತ್ರ ಮೊಹಮ್ಮದ್‌ಪುರ ಕಥಾರ್ ಗ್ರಾಮಕ್ಕೆ ಸಂಜಯ್ ನಿಶಾದ್ ಅವರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು. ಈ ವೇಳೆ, ಕೆಲವರು ಅವರನ್ನೇ ಗುರಿಯಾಗಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಗಲಾಟೆಯಲ್ಲಿ ಸಂಜಯ್ ಅವರ ಮೂಗಿಗೆ ಬಲವಾಗಿ ಪೆಟ್ಟಾಗಿದೆ.
ಇನ್ನು ಇದೊಂದು ನಿಯೋಜಿತ ದಾಳಿ ಎಂದು ಆರೋಪ ಮಾಡಿರುವ ಸಚಿವರು, ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವರು ತಮ್ಮ ಬೆಂಬಲಿಗರೊಂದಿಗೆ ಆಸ್ಪತ್ರೆ ಆವರಣದಲ್ಲಿಯೇ ಧರಣಿ ಕುಳಿತರು. ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಸಹ ಹಂಚಿಕೊಂಡಿದ್ದಾರೆ.