ಮುಂಬೈ, ಮಹಾರಾಷ್ಟ್ರ/ರಾಂಚಿ,ಜಾರ್ಖಂಡ್:ದೇಶಾದ್ಯಂತ ಭಾರಿ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಲಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ನಡುವೆ ಈ ಬಾರಿ ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ. ನಾಂದೇಡ್ ಲೋಕಸಭಾ ಉಪಚುನಾವಣೆಯ ಮತ ಎಣಿಕೆ ಕೂಡ ಇಂದು ನಡೆಯಲಿದೆ.
ನ.20 ರಂದು ನಡೆದ ಮತದಾನದಲ್ಲಿ 66.05 ರಷ್ಟು ವೋಟಿಂಗ್ ದಾಖಲಾಗಿದೆ. ನಾಂದೇಡ್ ಲೋಕಸಭಾ ಕ್ಷೇತ್ರ ಉಪಚುನಾವಣೆ ಮತದಾನದಲ್ಲಿ ಶೇ.67.81 ರಷ್ಟು ವೋಟಿಂಗ್ ಆಗಿದೆ. ಮತ ಎಣಿಕೆಗೆ ನಾಂದೇಡ್ ಲೋಕಸಭಾ ಉಪಚುನಾವಣೆ ಸೇರಿದಂತೆ ಒಟ್ಟು 288 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಒಟ್ಟು 288 ಮತ ಎಣಿಕೆ ವೀಕ್ಷಕರು ಪ್ರತಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಇದರ ಜೊತೆಗೆ ನಾಂದೇಡ್ ಲೋಕಸಭಾ ಉಪಚುನಾವಣೆಯ ಎಣಿಕೆಗೆ ಇಬ್ಬರು ವೀಕ್ಷಕರನ್ನು ನಿಯೋಜಿಸಲಾಗಿದೆ. ಅಂಚೆ ಮತ ಎಣಿಕೆಗಾಗಿ 1,732 ಟೇಬಲ್ಗಳನ್ನು ಮತ್ತು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸುಗಮ ಮತ ಎಣಿಕೆ ಪ್ರಕ್ರಿಯೆಗಾಗಿ ಇಟಿಪಿಬಿಎಸ್ (Electronically Transmitted Postal Ballot) 592 ಟೇಬಲ್ಗಳನ್ನು ಸ್ಥಾಪಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು: ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ 149, ಶಿವಸೇನೆ (ಶಿಂಧೆ ಬಣ) 81 ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ 59 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿರೋಧ ಪಕ್ಷದ ಎಂವಿಎ ಮೈತ್ರಿಕೂಟದಲ್ಲಿ ಕಾಂಗ್ರೆಸ್ 101, ಶಿವಸೇನೆ (ಯುಬಿಟಿ) 95 ಮತ್ತು ಎನ್ಸಿಪಿ (ಎಸ್ಪಿ) 86 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತ ಎಣಿಕೆಗೆ ಸಕಲ ಸಿದ್ಧತೆ:2019ರ ರಾಜ್ಯ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಅಭ್ಯರ್ಥಿಗಳ ಸಂಖ್ಯೆ ಶೇ.28ರಷ್ಟು ಹೆಚ್ಚಿದೆ. ಈ ಬಾರಿ 4,136 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. 36 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ನಗರದ ಎಲ್ಲಾ 36 ಮತ ಎಣಿಕೆ ಕೇಂದ್ರಗಳ 300 ಮೀಟರ್ ವ್ಯಾಪ್ತಿಯಲ್ಲಿ ಗುಂಪು ಸೇರುವುದನ್ನು ನಿಷೇಧಿಸಿ ಮುಂಬೈ ಪೊಲೀಸರು ಆದೇಶ ಹೊರಡಿಸಿದ್ದಾರೆ. ಈ ಆದೇಶವು ನವೆಂಬರ್ 21 ರಂದು ಬೆಳಗ್ಗೆ 6 ರಿಂದ ನವೆಂಬರ್ 24 ರ ಮಧ್ಯರಾತ್ರಿಯವರೆಗೆ ಜಾರಿಯಲ್ಲಿರುತ್ತದೆ.
ಮೂರು ಹಂತದ ಭದ್ರತೆ: ಸುಗಮ ಮತ ಎಣಿಕೆಗಾಗಿ ಕೇಂದ್ರಗಳಲ್ಲಿ ಮೂರು ಹಂತದ ಭದ್ರತೆ ಏರ್ಪಡಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಭದ್ರತಾ ಪಡೆಗಳು, ರಾಜ್ಯ ಮೀಸಲು ಪೊಲೀಸ್ ಪಡೆ ಮತ್ತು ರಾಜ್ಯ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಟ್ರಾಂಗ್ ರೂಂನಲ್ಲಿರುವ ಇವಿಎಂಗಳು ಸಿಸಿಟಿವಿ ಕಣ್ಗಾವಲಿನಲ್ಲಿದ್ದು, ಅವುಗಳ ದೃಶ್ಯಾವಳಿಗಳನ್ನು ಅಭ್ಯರ್ಥಿಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ಬೆಳಗ್ಗೆ ವೀಕ್ಷಕರು ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗುತ್ತದೆ.