ನವದೆಹಲಿ: ಬಿಜೆಪಿ ಪಕ್ಷವು ಮತಕ್ಕಾಗಿ ಚಿನ್ನದ ಸರಗಳನ್ನು ಹಂಚುತ್ತಿದೆ. ಈ ಮೂಲಕ ಕೇಸರಿ ಪಕ್ಷ ಅನ್ಯಾಯದ ಮಾರ್ಗಗಳನ್ನು ಅನುಸರಿಸುತ್ತಿದೆ ಎಂದು ಎಎಪಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮತದಾರರು ಪ್ರಚೋದನೆಗೆ ಒಳಗಾಗಬಾರದು. ಎರಡು ಕಾಲೊನಿಗಳಲ್ಲಿ ಚಿನ್ನದ ಸರ ಹಂಚಲಾಗುತ್ತಿದೆ ಎಂದು ಕೇಳಿದ್ದೇನೆ. ದೆಹಲಿ ಜನರನ್ನು ಖರೀದಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯ ನಡೆ ನಾಚಿಕೆಗೇಡು. ಅವರು ಏನೇ ಕೊಟ್ಟರೂ ಸ್ವೀಕರಿಸಿ, ಆದರೆ ನಿಮ್ಮ ಮತ ಮಾರಾಟವಾಗಲು ಬಿಡಬೇಡಿ. ನಮ್ಮ ಮತ ವಜ್ರಕ್ಕಿಂತ ಅಮೂಲ್ಯವಾದದ್ದು. ಚುನಾವಣಾ ಸಂದರ್ಭದಲ್ಲಿ ಹಣ ಅಥವಾ ಯಾವುದೇ ವಸ್ತುಗಳನ್ನು ನೀಡಿದರೆ, ಎಎಪಿ ಅಭ್ಯರ್ಥಿಗಳು ಸೇರಿದಂತೆ ಯಾರಿಗೂ ಮತ ಹಾಕಬೇಡಿ" ಎಂದು ದೆಹಲಿಯ ಜನರಿಗೆ ಮನವಿ ಮಾಡಿದರು.
ದೆಹಲಿಯಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಆಮ್ ಆದ್ಮಿ ಪಕ್ಷ ಹಾಗೂ ಭಾರತೀಯ ಜನತಾ ಪಕ್ಷ ನಡುವಿನ ರಾಜಕೀಯ ಜಟಾಪಟಿ ರಾಷ್ಟ್ರ ರಾಜಧಾನಿಯಲ್ಲಿ ತೀವ್ರಗೊಂಡಿದೆ.
ಭಾರತದ ಪ್ರಜಾಪ್ರಭುತ್ವ ಮಾರಾಟಕ್ಕಿಲ್ಲ: "ಬಿಜೆಪಿ ಈಗ ಸಾರ್ವಜನಿಕರಿಗೆ ಚಿನ್ನದ ಸರಗಳನ್ನು ವಿತರಿಸಲು ಪ್ರಾರಂಭಿಸಿದೆ ಎಂದು ನಮಗೆ ತಿಳಿದಿದೆ. ಎರಡು ಕಾಲೋನಿಗಳಲ್ಲಿ ಅವರು ಇದನ್ನು ಮಾಡಿದ್ದಾರೆ. ಅವರ ನಾಯಕರು ದೆಹಲಿಯ ಜನರ ಮತಗಳನ್ನು ಖರೀದಿಸುತ್ತೇವೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಈ ಜನರು ದೆಹಲಿಯ ಜನರನ್ನು ಮಾರಾಟಕ್ಕಿದ್ದಾರೆಂದು ಭಾವಿಸಿದ್ದಾರೆ. ಆದರೆ, ಈ ಬಾರಿ ದೆಹಲಿಯ ಜನ ಅವರಿಗೆ ಪಾಠ ಕಲಿಸುತ್ತಾರೆ. ಭಾರತೀಯ ಪ್ರಜಾಪ್ರಭುತ್ವ ಮಾರಾಟಕ್ಕಿಲ್ಲ ಮತ್ತು ದೆಹಲಿಯ ಜನರನ್ನು ಖರೀದಿಸಬಲ್ಲ ಯಾರೂ ಈ ಭೂಮಿಯಲ್ಲಿ ಹುಟ್ಟಿಲ್ಲ ಎಂಬುದನ್ನು ತೋರಿಸುತ್ತಾರೆ" ಎಂದು ಬಿಜೆಪಿ ವಿರುದ್ಧ ದಾಳಿ ನಡೆಸಿದರು.