ನವದೆಹಲಿ:ಕಳೆದ ಮೂರು ದಿನಗಳ ಹಿಂದಷ್ಟೇ ಆರ್ಎಸ್ಎಸ್ಗೆ ಪಂಚ ಪ್ರಶ್ನೆ ಹಾಕಿದ್ದ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಬುಧವಾರ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ. "ಬಿಜೆಪಿಯ ಇಂದಿನ ರಾಜಕಾರಣ ಮತ್ತು ಪಕ್ಷವು ಸಂಘವನ್ನು ನಡೆಸಿಕೊಳ್ಳುವ ರೀತಿ ಕಂಡು ನಿಮಗೆ ನೋವಾಗುತ್ತಿಲ್ಲವೇ" ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ರಾಜಕಾರಣವನ್ನು ಟೀಕಿಸಿರುವ ಕೇಜ್ರಿವಾಲ್, ಆರ್ಎಸ್ಎಸ್ನ ಗರ್ಭದಿಂದ ಉದಯಿಸಿದ ಬಿಜೆಪಿಯ ಹೀನ ರಾಜಕಾರಣ ಕಂಡು ನಿಮಗೆ ನೋವಾಗುತ್ತಿಲ್ಲವೇ?, ನೀವೇ ಬೆಳೆಸಿದ ಪುತ್ರ (ಮೋದಿ) ನಿಮ್ಮನ್ನೇ ಕೀಳಾಗಿ ಕಾಣುತ್ತಿರುವ ಬಗ್ಗೆ ನಿಮಗೆ ಬೇಸರ ಇಲ್ಲವೇ?, 75ರ ನಿವೃತ್ತಿ ವಯಸ್ಸಿನ ಕಾರಣ ಹಿರಿಯ ರಾಜಕಾರಣಿ ಎಲ್ಕೆ ಅಡ್ವಾಣಿ ಅವರನ್ನು ರಾಜಕೀಯದಿಂದ ನಿವೃತ್ತರಾಗುವಂತೆ ಮಾಡಲಾಯಿತು. ಆ ನಿಯಮ ಪ್ರಧಾನಿ ಮೋದಿ ಅವರಿಗೆ ಅನ್ವಯವಾಗುವುದಿಲ್ಲವೇ ಎಂದೆಲ್ಲಾ ಮರು ಪ್ರಶ್ನೆ ಮಾಡಿದ್ದಾರೆ.
ತನಿಖಾ ತಂಡಗಳಿಂದ ಬೆದರಿಕೆ:ಲೋಕಸಭೆ ಚುನಾವಣೆಗೂ ಮೊದಲು ಭ್ರಷ್ಟಾಚಾರ ಆರೋಪ ಮಾಡಿದ್ದ ನಾಯಕನನ್ನು ಬಿಜೆಪಿಯೇ ರತ್ನಗಂಬಳಿ ಹಾಕಿ ಪಕ್ಷಕ್ಕೆ ಬರಮಾಡಿಕೊಂಡಿತು. ಅವರ ಜೊತೆಗೆ ಸೇರಿ ಸರ್ಕಾರ ರಚನೆ ಮಾಡಲಾಗಿದೆ. ಕೇಂದ್ರೀಯ ತನಿಖಾ ತಂಡಗಳಾದ ಜಾರಿ ನಿರ್ದೇಶನಾಲಯ (ಇ.ಡಿ.), ಕೇಂದ್ರೀಯ ತನಿಖಾ ದಳ (ಸಿಬಿಐ) ಅನ್ನು ರಾಜಕೀಯ ಕಾರಣಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆರ್‌ಎಸ್‌ಎಸ್ ಇದನ್ನು ಒಪ್ಪುತ್ತದೆಯೇ?. ಇಂತಹ ಹಲವಾರು ಪ್ರಶ್ನೆಗಳು ಪ್ರತಿ ಭಾರತೀಯನ ಮನಸ್ಸಿನಲ್ಲಿವೆ ಎಂದಿದ್ದಾರೆ.
ವಾಮಮಾರ್ಗದ ಮೂಲಕ ಇತರ ಪಕ್ಷಗಳ ನೇತೃತ್ವದ ಸರ್ಕಾರಗಳನ್ನು ಕೆಡವುದು, ಅದರ ನಾಯಕರನ್ನು ಬಿಜೆಪಿಗೆ ಸೆಳೆಯುವುದನ್ನು ಕಂಡಾಗ ನೀವು ಬೆಳೆಸಿದ ಬಿಜೆಪಿಯ ಹೀನ ರಾಜಕಾರಣದ ಬಗ್ಗೆ ವ್ಯಥೆ ಉಂಟಾಗುವುದಿಲ್ಲವೇ ಎಂದು ಕೇಜ್ರಿವಾಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಿಜೆಪಿ ರಾಜಕಾರಣ ಒಪ್ಪುವಿರಾ?:ನಮ್ಮ ದೇಶದ ತ್ರಿವರ್ಣ ಧ್ವಜವು ಆಕಾಶದಲ್ಲಿ ಹೆಮ್ಮೆಯಿಂದ ಹಾರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಲ್ಲವೇ?, ಮೋದಿ ಅವರು ವಿಪಕ್ಷ ನಾಯಕರನ್ನು ಸೆಳೆಯುವ ರೀತಿ, ಇಡಿ, ಸಿಬಿಐ ಮೂಲಕ ಬೆದರಿಕೆ ಹಾಕುವುದು, ನಾಯಕರನ್ನು ಜೈಲಿಗೆ ಕಳುಹಿಸುವುದು, ಪಕ್ಷ ಇಬ್ಭಾಗ ಮಾಡುವುದು, ಸರ್ಕಾರವನ್ನು ಬೀಳಿಸುವ ಕೃತ್ಯಗಳು ಸರಿಯೇ?. ಇದು ಭಾರತದ ಪ್ರಜಾಪ್ರಭುತ್ವಕ್ಕೆ ಹಾನಿಕರ ಎಂದು ನಿಮಗೆ ಅನಿಸುವುದಿಲ್ಲವೇ? ಈ ರೀತಿಯ ರಾಜಕೀಯವನ್ನು ನೀವು ಒಪ್ಪುತ್ತೀರಾ? ಇಂತಹ ಬಿಜೆಪಿಯನ್ನು ನೀವು ಎಂದಾದರೂ ಊಹಿಸಿದ್ದೀರಾ? ಎಂದು ಕೇಳಿದ್ದಾರೆ.
ಆರೆಸ್ಸೆಸ್ ಗರ್ಭದಿಂದ ಬಿಜೆಪಿ ಹುಟ್ಟಿದೆ ಎಂದು ಪತ್ರದಲ್ಲಿ ಬರೆದಿರುವ ದೆಹಲಿ ಮಾಜಿ ಸಿಎಂ, ಬಿಜೆಪಿ ದಾರಿ ತಪ್ಪದಂತೆ ನೋಡಿಕೊಳ್ಳುವುದು ಆರ್‌ಎಸ್‌ಎಸ್ ಜವಾಬ್ದಾರಿ. ಬಿಜೆಪಿಯ ಈ ಅನೈತಿಕ ಕ್ರಮಗಳನ್ನು ನೀವು ಒಪ್ಪುತ್ತೀರಾ? ಇದಕ್ಕೆಲ್ಲಾ ನಿಲ್ಲಿಸುವಂತೆ ಮೋದಿ ಅವರಿಗೆ ಸೂಚಿಸಿದ್ದೀರಾ?, ಬಿಜೆಪಿಗೆ ಆರೆಸ್ಸೆಸ್ ಅಗತ್ಯವಿಲ್ಲ ಎಂದು ಲೋಕಸಭೆ ಚುನಾವಣೆ ವೇಳೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದರು. ಆರ್‌ಎಸ್‌ಎಸ್ ಬಿಜೆಪಿಯ ತಾಯಿ ಇದ್ದಂತೆ. ಅಮ್ಮನ ಕಡೆಯೇ ಈಗ ಮಗ ಅಸಡ್ಡೆಯಿಂದ ನೋಡುತ್ತಿದ್ದಾನೆ. ಇದು ನಿಮ್ಮ ಹೃದಯದಲ್ಲಿ ದುಃಖ ತಂದಿಲ್ಲವೇ ಎಂದಿದ್ದಾರೆ.
ಇದನ್ನೂ ಓದಿ;10 ವರ್ಷ ಸಿಎಂ ಆಗಿದ್ದರೂ ಮನೆ ಇಲ್ಲ, 75ರ ನಿವೃತ್ತಿ ಮೋದಿಗೆ ಅನ್ವಯಿಸುತ್ತದೆಯೇ?: ಕೇಜ್ರಿವಾಲ್ ಪ್ರಶ್ನೆ - ARVIND KEJRIWAL QUESTIONED PM MODI