ನವದೆಹಲಿ:ಮುಖ್ಯಮಂತ್ರಿ ಪಟ್ಟಕ್ಕೆ ರಾಜೀನಾಮೆ ನೀಡಿರುವ ಅರವಿಂದ್ ಕೇಜ್ರಿವಾಲ್, ತಮ್ಮ ಸರ್ಕಾರಿ ನಿವಾಸವನ್ನೂ ತೊರೆಯಲಿದ್ದಾರೆ ಎಂದು ತಿಳಿದು ಬಂದಿದೆ. ಸಿಎಂ ಅಧಿಕೃತ ನಿವಾಸ ಖಾಲಿ ಮಾಡಿದ ಬಳಿಕ ಅವರು ಎಲ್ಲಿ ವಾಸಿಸುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರಾಂತ್ಯದಲ್ಲಿ ಸಿಎಂಗೆ ವಾಸಿಸಲು ಯಾವುದೇ ಅಧಿಕೃತ ಸರ್ಕಾರಿ ನಿವಾಸವಿಲ್ಲ. ಇತರ ರಾಜ್ಯಗಳಂತೆ ಯಾವುದೇ ಸರ್ಕಾರಿ ನಿವಾಸವನ್ನು ಮಾಜಿ ಮುಖ್ಯಮಂತ್ರಿಗಳಿಗೆ ನೀಡಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅರವಿಂದ್ ಕೇಜ್ರಿವಾಲ್ ಕೂಡ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂಬುದು ಈಗಿರುವ ಕುತೂಹಲ.
ಐದು ಬಾರಿಯ ಶಾಸಕ ಮೋಹನ್ ಸಿಂಗ್ ಹೇಳುವುದಿಷ್ಟು: ದೆಹಲಿಯ ರಾಜಕೀಯವನ್ನು ಹತ್ತಿರದಿಂದ ಬಲ್ಲ ಮತ್ತು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮೋಹನ್ ಸಿಂಗ್ ಬಿಶ್ತ್ ಹೇಳುವ ಪ್ರಕಾರ, ದೆಹಲಿಯ ಮಾಜಿ ಮುಖ್ಯಮಂತ್ರಿಗಳು ವಿವಿಧ ಸ್ಥಳಗಳಲ್ಲಿ ವಿವಿಧ ಸರ್ಕಾರಿ ಬಂಗಲೆಗಳಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ಈ ಸಮಸ್ಯೆಯನ್ನು ಎಂದಿಗೂ ಗಂಭೀರವಾಗಿ ಪರಿಗಣಿಸಲಾಗಿಲ್ಲ. 1993 ರಲ್ಲಿ ದೆಹಲಿಯಲ್ಲಿ ವಿಧಾನಸಭೆ ರಚನೆ ಮಾಡಿದಾಗ ವಿಧಾನಸಭೆಯ ಬಳಿ ಇರುವ ಸರ್ಕಾರಿ ಬಂಗಲೆ ಸಂಖ್ಯೆ 33ರನ್ನು ಅಂದಿನ ಮುಖ್ಯಮಂತ್ರಿ ಮದನ್‌ಲಾಲ್ ಖುರಾನಾ ಅವರಿಗೆ ನೀಡಲಾಗಿತ್ತು. ಆ ನಂತರ ಮುಂದಿನ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಆ ಬಂಗಲೆಯಲ್ಲಿ ವಾಸವಾಗಿರಲಿಲ್ಲ. ಶಾಮನಾಥ್ ಮಾರ್ಗದಲ್ಲಿರುವ ಇನ್ನೊಂದು ಬಂಗಲೆಯಲ್ಲಿ ವಾಸ ಮಾಡಲು ಅವರು ಆದ್ಯತೆ ನೀಡಿದ್ರು. ಅದಕ್ಕೂ ಮೊದಲು ಸಚಿವರಾಗಿ ಈ ಸರ್ಕಾರಿ ಬಂಗಲೆಯಲ್ಲಿ ವಾಸವಾಗಿದ್ದರು.
ಶೀಲಾ ದೀಕ್ಷಿತ್ ಇದ್ದ ಮನೆಯಲ್ಲಿ ನಿಯೋಜಿತ ಸಿಎಂ ವಾಸ:1998 ರ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳ ಮೊದಲು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು ಆ ಎರಡು ಬಂಗಲೆಗಳಲ್ಲಿ ವಾಸಿಸುತ್ತಿರಲಿಲ್ಲ. ಸಿವಿಲ್ ಲೈನ್ಸ್ ನಲ್ಲಿರುವ ದೆಹಲಿಯ ತಮ್ಮ ಸರ್ಕಾರಿ ಬಂಗಲೆಯಲ್ಲಿ ಉಳಿಯಲು ನಿರ್ಧರಿಸಿದ್ದರು. ಸುಷ್ಮಾ ಸ್ವರಾಜ್ ದೆಹಲಿಯ ಮುಖ್ಯಮಂತ್ರಿಯಾಗಿ ಕೇವಲ 53 ದಿನ ಮಾತ್ರ ಇದ್ದರು. ಅವರ ನಾಯಕತ್ವದಲ್ಲಿ ಬಿಜೆಪಿ 1998 ರ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿತ್ತು. ಆ ಬಳಿಕ, ದಿಲ್ಲಿ ರಾಜ್ಯದ ಅಧಿಕಾರದ ಗದ್ದುಗೆ ಏರುವಲ್ಲಿ ಬಿಜೆಪಿ ವಿಫಲವಾಗಿದೆ. ಸುಷ್ಮಾ ಸ್ವರಾಜ್ ನಂತರ ಶೀಲಾ ದೀಕ್ಷಿತ್ ದೆಹಲಿಯ ಎರಡನೇ ಮಹಿಳಾ ಮುಖ್ಯಮಂತ್ರಿಯಾದರು. ಶೀಲಾ ದೀಕ್ಷಿತ್ ಅವರು ತಮ್ಮ ಮೊದಲ ಅವಧಿಯಲ್ಲಿ ಮಥುರಾ ರಸ್ತೆಯಲ್ಲಿರುವ ಎಬಿ-17 ಸರ್ಕಾರಿ ಮನೆಯಲ್ಲಿ ವಾಸಿಸುತ್ತಿದ್ದರು, ಪ್ರಸ್ತುತ ಈ ಸರ್ಕಾರಿ ನಿವಾಸ, ನಿಯೋಜಿತ ಸಿಎಂ ಅತಿಶಿಗೆ ಮಂಜೂರು ಮಾಡಲಾಗಿದೆ ಮತ್ತು ಅದಕ್ಕೂ ಮೊದಲು ಮನೀಶ್ ಸಿಸೋಡಿಯಾ ಈ ನಿವಾಸದಲ್ಲಿ ಅಧಿಕೃತವಾಗಿ ವಾಸಿಸುತ್ತಿದ್ದರು.