ನವದೆಹಲಿ: ದೆಹಲಿ ಸರ್ಕಾರದ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಬಂಧಿಸಿರುವುದಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾರಿ ನಿರ್ದೇಶನಾಲಯದ (ಇಡಿ) ಏಕಮಾತ್ರ ಉದ್ದೇಶ ನನ್ನನ್ನು ಅವಮಾನಿಸುವುದಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ನನ್ನನ್ನು ತಡೆಯುವುದು ಅವರ ಮುಖ್ಯ ಉದ್ದೇಶವಾಗಿದೆ ಎಂದು ಕಿಡಿಕಾರಿದ್ದಾರೆ. ಇಡಿ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಅವರು ಮಧ್ಯಂತರ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠವು ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿತು. ಕೇಜ್ರಿವಾಲ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ವಿಕ್ರಮ್ ಚೌಧರಿ ವಾದ ಮಂಡಿಸಿದರು.
ದೆಹಲಿ ಮುಖ್ಯಮಂತ್ರಿಯ ಬಂಧನದ ಸಮಯ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದು ಅವರು ಹೇಳಿದರು. ಅದರಲ್ಲೂ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈ ಬಂಧನ ನಡೆದಿರುವುದು ದುರದೃಷ್ಟಕರ. ಇಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಹಾಜರಿದ್ದರು. ಈ ಅರ್ಜಿ ಮೇಲಿನ ವಾದ ಪ್ರತಿವಾದಗಳು ಹೈಕೋರ್ಟ್‌ನಲ್ಲಿ ಕೊನೆಗೊಂಡಿದ್ದು, ತೀರ್ಪು ಕಾಯ್ದಿರಿಸಲಾಗಿದೆ.