ಅಮರಾವತಿ(ಆಂಧ್ರ ಪ್ರದೇಶ): ಭಾರತದಲ್ಲಿ ಮೊದಲ ಬಾರಿಗೆ ಆಂಧ್ರ ಪ್ರದೇಶ ಸರ್ಕಾರವು ಇಂದಿನಿಂದ ವಾಟ್ಸ್‌ಆ್ಯಪ್ ಆಡಳಿತವನ್ನು ಪ್ರಾರಂಭಿಸಲಿದೆ. ವಾಟ್ಸ್‌ಆ್ಯಪ್ ಮೂಲಕವೇ ನಾಗರಿಕ ಸೇವೆಗಳನ್ನು ಒದಗಿಸುವುದು, ಸಾರ್ವಜನಿಕರ ಕುಂದುಕೊರತೆ ಪರಿಹರಿಸುವುದು ಮತ್ತು ಅಗತ್ಯ ಮಾಹಿತಿಯನ್ನು ಒದಗಿಸುವುದು ವಾಟ್ಸ್‌ಆ್ಯಪ್ ಆಡಳಿತದ ಉದ್ದೇಶವಾಗಿದೆ. ಮೊದಲ ಹಂತದಲ್ಲಿ 161 ಸೇವೆಗಳನ್ನು ವಾಟ್ಸ್ಆ್ಯಪ್ನೊಂದಿಗೆ ಜೋಡಿಸಲಾಗುತ್ತಿದ್ದು, ಮುಂದಿನ ಹಂತಗಳಲ್ಲಿ ಸರ್ಕಾರದ ಮತ್ತಷ್ಟು ಸೇವೆಗಳನ್ನು ಸೇರಿಸಲಾಗುವುದು. ಐಟಿ ಸಚಿವ ನಾರಾ ಲೋಕೇಶ್ ಗುರುವಾರ ಅಧಿಕೃತವಾಗಿ ಈ ಸೇವೆಗೆ ಚಾಲನೆ ನೀಡಲಿದ್ದಾರೆ.
ಹಂತ 1ರಲ್ಲಿ ವಾಟ್ಸ್‌ಆ್ಯಪ್ ಆಡಳಿತಕ್ಕೆ ಜೋಡಣೆಯಾಗಲಿರುವ ಇಲಾಖೆಗಳು ಹೀಗಿವೆ:
- ಕಂದಾಯ
- ಪುರಸಭೆ ಆಡಳಿತ
- ದತ್ತಿಗಳು
- ಇಂಧನ
- ಆಂಧ್ರ ಪ್ರದೇಶ ರಸ್ತೆ ಸಾರಿಗೆ ಇಲಾಖೆ
ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಬುಧವಾರ ಯೋಜನೆಯನ್ನು ಪರಿಶೀಲಿಸಿದರು. ವಾಟ್ಸ್‌ಆ್ಯಪ್ ಮೂಲಕ ಸೇವೆಗಳನ್ನು ಹೇಗೆ ಜನರಿಗೆ ತಲುಪಿಸಲಾಗುತ್ತದೆ ಎಂಬುದನ್ನು ಅಧಿಕಾರಿಗಳು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಪ್ರಾತ್ಯಕ್ಷಿಕೆ ತೋರಿಸಿದರು. ಈ ವ್ಯವಸ್ಥೆಯು ಮೂಲಭೂತ ಸೇವೆಗಳಿಗಾಗಿ ಜನತೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುತ್ತದೆ ಎಂದು ಸಿಎಂ ಹೇಳಿದರು.
ಸೈಬರ್ ಅಪಾಯದಿಂದ ನಾಗರಿಕರ ಡೇಟಾವನ್ನು ರಕ್ಷಿಸುವಂತೆ, ವಿಧಿವಿಜ್ಞಾನ ಮತ್ತು ಸೈಬರ್ ಸುರಕ್ಷತಾ ಕ್ರಮಗಳನ್ನು ಬಲಪಡಿಸುವಂತೆ ಮತ್ತು ಕಟ್ಟುನಿಟ್ಟಾದ ರಕ್ಷಣಾ ಪ್ರೋಟೋಕಾಲ್ಗಳನ್ನು ಅಳವಡಿಸಿಕೊಳ್ಳುವಂತೆ ಸಿಎಂ ನಾಯ್ಡು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಾಟ್ಸ್‌ಆ್ಯಪ್ ಮೂಲಕ ಸರ್ಕಾರದ ಸೇವೆಗಳನ್ನು ಜನರಿಗೆ ತಲುಪಿಸಲು ರಾಜ್ಯವು ಅಕ್ಟೋಬರ್ 22, 2023ರಂದು ಮೆಟಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಆಂಧ್ರ ಪ್ರದೇಶ ಸರ್ಕಾರದ ಡಿಜಿಟಲ್ ಫಸ್ಟ್ ನೀತಿಗೆ ಅನುಗುಣವಾಗಿದೆ.
ವಾಟ್ಸ್‌ಆ್ಯಪ್ ಆಡಳಿತ ಹೇಗೆ ಕೆಲಸ ಮಾಡುತ್ತದೆ?:
ವೆರಿಫೈಡ್ ಟ್ಯಾಗ್‌ನೊಂದಿಗೆ ಅಧಿಕೃತ ವಾಟ್ಸ್‌ಆ್ಯಪ್ ಸಂಖ್ಯೆ: ಪರಿಶೀಲಿಸಿದ ಟಿಕ್ ಮಾರ್ಕ್ ಹೊಂದಿರುವ ಸರ್ಕಾರದ ಅಧಿಕೃತ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಘೋಷಿಸಲಾಗುವುದು. ಇದರಿಂದ ತುರ್ತು ಎಚ್ಚರಿಕೆಗಳು, ಹವಾಮಾನ ಅಪ್ಡೇಟ್ಗಳು, ಮೂಲಸೌಕರ್ಯ ಅಭಿವೃದ್ಧಿ, ವೈದ್ಯಕೀಯ ಸೇವೆಗಳು ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸರ್ಕಾರದ ಸಂದೇಶಗಳು ಲಕ್ಷಾಂತರ ಜನರನ್ನು ತಕ್ಷಣ ತಲುಪುತ್ತವೆ.
ವಿನಂತಿಗಳು ಮತ್ತು ದೂರುಗಳನ್ನು ಸಲ್ಲಿಸುವುದು: ನಾಗರಿಕರು ಅಧಿಕೃತ ವಾಟ್ಸ್‌ಆ್ಯಪ್ ಸಂಖ್ಯೆಗೆ ಸಂದೇಶವನ್ನು ಕಳುಹಿಸಬಹುದು. ಹೆಸರು, ಫೋನ್ ಸಂಖ್ಯೆ, ವಿಳಾಸ ಮತ್ತು ವಿನಂತಿ ಹೀಗೆ ಎಲ್ಲ ವಿವರಗಳನ್ನು ಸಲ್ಲಿಸಲು ಅವರಿಗೆ ಲಿಂಕ್ ಬರುತ್ತದೆ. ದೂರನ್ನು ಟ್ರ್ಯಾಕ್ ಮಾಡಲು ರೆಫರೆನ್ಸ್ ಸಂಖ್ಯೆಯನ್ನು ಒದಗಿಸಲಾಗುವುದು.
ಸರ್ಕಾರಿ ಸೇವೆಗಳನ್ನು ಪಡೆಯುವುದು: ಸಂದೇಶವನ್ನು ಕಳುಹಿಸುವ ಮೂಲಕ ಕಲ್ಯಾಣ ಯೋಜನೆಗಳು, ಅರ್ಹತೆ ಮತ್ತು ಪ್ರಯೋಜನಗಳ ಬಗ್ಗೆ ವಿವರಗಳನ್ನು ಪಡೆಯಬಹುದು.