ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ ಚುನಾವಣೆ ರ್ಯಾಲಿ ರದ್ದುಗೊಳಿಸಿ ದೆಹಲಿಗೆ ವಾಪಸ್​ ತೆರಳಿದ ಕೇಂದ್ರ ಗೃಹಸಚಿವ ಅಮಿತ್​ ಶಾ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ರ್ಯಾಲಿಗಳನ್ನು ರದ್ದು ಮಾಡಿ ದೆಹಲಿಗೆ ವಾಪಸ್​ ಆಗಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್​ ಶಾ
ಕೇಂದ್ರ ಗೃಹಸಚಿವ ಅಮಿತ್​ ಶಾ (IANS)

By PTI

Published : 4 hours ago

ನವದೆಹಲಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು (ಭಾನುವಾರ) ಮಹಾರಾಷ್ಟ್ರದಲ್ಲಿ ನಡೆಯಬೇಕಿದ್ದ ಚುನಾವಣಾ ರ್ಯಾಲಿಯನ್ನು ರದ್ದುಗೊಳಿಸಿ, ದೆಹಲಿಗೆ ವಾಪಸ್​ ಆಗಿದ್ದಾರೆ. ಈಶಾನ್ಯ ರಾಜ್ಯ ಮಣಿಪುರದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಅವರು ರಾಷ್ಟ್ರ ರಾಜಧಾನಿಗೆ ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರು ಹಲವೆಡೆ ಮತಪ್ರಚಾರದಲ್ಲಿ ತೊಡಗಿಕೊಳ್ಳಬೇಕಿತ್ತು. ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿ ಮಾತನಾಡಬೇಕಿತ್ತು. ಆದರೆ, ದಿಢೀರ್​ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ.

ಶಾ ಅವರ ರ್ಯಾಲಿ ರದ್ದಾದ ಹಿಂದಿನ ಕಾರಣದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ, ಮಣಿಪುರದ ಹಿಂಸಾಚಾರವೇ ಕಾರಣ. ಈಶಾನ್ಯ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ಗೃಹ ಸಚಿವರು ಇಂದು ಉನ್ನತ ಅಧಿಕಾರಿಗಳ ಜೊತೆಗೆ ಸಭೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಮಣಿಪುರದಲ್ಲಿ ಪರಿಸ್ಥಿತಿ ಉದ್ವಿಗ್ನ:ಕೆಲ ದಿನಗಳಿಂದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ನಾಪತ್ತೆಯಾಗಿದ್ದ 6 ಮಂದಿ ಶವಗಳು ಶನಿವಾರ ಪತ್ತೆಯಾದ ಬಳಿಕ ಉದ್ರಿಕ್ತರು ಸಿಎಂ ನಿವಾಸ, ಸಚಿವರು, ಶಾಸಕರ ಮನೆಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ. ಇದರಿಂದ ರಾಜ್ಯವು ಮತ್ತೆ ಹೊತ್ತಿ ಉರಿಯುತ್ತಿದೆ.

ರಾಜಧಾನಿ ಇಂಫಾಲದಲ್ಲಿ ಬಿಜೆಪಿಯ ಮೂವರು ಶಾಸಕರು, ಹಿರಿಯ ಸಚಿವರು ಮತ್ತು ಕಾಂಗ್ರೆಸ್ ಶಾಸಕರ ನಿವಾಸಗಳಿಗೆ ಬೆಂಕಿ ಹಚ್ಚಿದ ಆಕ್ರೋಶಿತ ಗುಂಪುಗಳು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನಿವಾಸಕ್ಕೆ ನುಗ್ಗಲು ಯತ್ನಿಸಿದ್ದಾರೆ. ಆದರೆ, ಭದ್ರತಾ ಪಡೆಗಳು ಇದನ್ನು ವಿಫಲಗೊಳಿಸಿವೆ.

ಜಿರಿಬಮ್ ಜಿಲ್ಲೆಯಲ್ಲಿ ಉಗ್ರರು ತಲಾ ಮೂವರು ಮಹಿಳೆಯರು ಮತ್ತು ಮಕ್ಕಳನ್ನು ಹತ್ಯೆಗೈದಿದ್ದು, ಹಿಂಸಾಚಾರ ಮರುಕಳಿಸಲು ಕಾರಣವಾಗಿದೆ. ಇಂಫಾಲ್​ನಲ್ಲಿ ಅನಿರ್ದಿಷ್ಟ ಕರ್ಫ್ಯೂ ವಿಧಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಇಂಟರ್​​ನೆಟ್​ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ:ಮಣಿಪುರ ಹಿಂಸಾಚಾರ: ಸಿಎಂ ನಿವಾಸಕ್ಕೆ ನುಗ್ಗಲು ಯತ್ನ; ಶಾಸಕ-ಸಚಿವರ ಮನೆಗಳ ಮೇಲೆ ದಾಳಿ, ಕರ್ಫ್ಯೂ ಜಾರಿ

ABOUT THE AUTHOR

...view details