ಜಮ್ಮು: ಕಳೆದ 29 ದಿನಗಳಲ್ಲಿ 4.51 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಅಮರನಾಥ ಯಾತ್ರೆ ಕೈಗೊಂಡಿದ್ದು, ಈ ಸಂಖ್ಯೆ ಕಳೆದ ವರ್ಷದ ದಾಖಲೆಯನ್ನು ಹಿಂದಿಕ್ಕಿದೆ.
"ಜೂನ್ 29 ರಂದು ಯಾತ್ರೆ ಪ್ರಾರಂಭವಾದಾಗಿನಿಂದ ಕಳೆದ 29 ದಿನಗಳಲ್ಲಿ, 4.51 ಲಕ್ಷಕ್ಕೂ ಹೆಚ್ಚು ಜನರು ಪವಿತ್ರ ಗುಹೆಯ 'ದರ್ಶನ' ಮಾಡಿದ್ದಾರೆ. ಇದು ಕಳೆದ ವರ್ಷದ ಯಾತ್ರೆಯ ದಾಖಲೆಯನ್ನು ಮುರಿದಿದೆ" ಎಂದು ವಾರ್ಷಿಕ ಅಮರನಾಥ ತೀರ್ಥಯಾತ್ರೆಯನ್ನು ನಿರ್ವಹಿಸುವ ಶ್ರೀ ಅಮರನಾಥಜಿ ದೇವಾಲಯ ಮಂಡಳಿಯ (ಎಸ್ಎಎಸ್ಬಿ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶನಿವಾರ, ಸುಮಾರು 8,000 ಯಾತ್ರಾರ್ಥಿಗಳು ಗುಹೆ ದೇವಾಲಯಕ್ಕೆ ಭೇಟಿ ನೀಡಿದ್ದು, 1,677 ಯಾತ್ರಾರ್ಥಿಗಳ ಮತ್ತೊಂದು ತಂಡ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಭಾನುವಾರ ಕಣಿವೆಗೆ ಹೊರಟಿದೆ.
"1,677 ಯಾತ್ರಾರ್ಥಿಗಳ ಪೈಕಿ 408 ಯಾತ್ರಿಗಳ ಮೊದಲ ತಂಡವು ಮುಂಜಾನೆ 3.35 ಕ್ಕೆ 24 ವಾಹನಗಳಲ್ಲಿ ಬೆಂಗಾವಲು ಪಡೆಯೊಂದಿಗೆ ಉತ್ತರ ಕಾಶ್ಮೀರದ ಬಾಲ್ಟಾಲ್ ಬೇಸ್ ಕ್ಯಾಂಪ್ಗೆ ಪ್ರಯಾಣ ಬೆಳೆಸಿದೆ. 1,269 ಯಾತ್ರಿಗಳ ಎರಡನೇ ತಂಡವು 43 ವಾಹನಗಳಲ್ಲಿ ಬೆಂಗಾವಲು ಪಡೆಯೊಂದಿಗೆ ದಕ್ಷಿಣ ಕಾಶ್ಮೀರ ನುನ್ವಾನ್ (ಪಹಲ್ಗಾಮ್) ಬೇಸ್ ಕ್ಯಾಂಪ್ಗೆ ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.