ಕರ್ನಾಟಕ

karnataka

ಅಧಾರ್ಮಿಕ ಚಟುವಟಿಕೆ ಆರೋಪ: 13 ಮಹಾಮಂಡಲೇಶ್ವರರು, ಸಂತರನ್ನು ಹೊರಹಾಕಿದ ಅಖಾಡಾ ಪರಿಷತ್ - AKHARA PARISHAD

By IANS

Published : Jul 16, 2024, 2:32 PM IST

ಅಧಾರ್ಮಿಕ ಚಟುವಟಿಕೆಗಳನ್ನು ನಡೆಸಿದ ಆರೋಪದ ಮೇಲೆ 13 ಮಹಾಮಂಡಲೇಶ್ವರರು, ಸಂತರನ್ನು ಅಖಾಡಾ ಪರಿಷತ್ ಹೊರಹಾಕಿದೆ.

ಅಖಾಡಾ ಪರಿಷತ್ ಸಂತರು
ಅಖಾಡಾ ಪರಿಷತ್ ಸಂತರು (IANS)

ಪ್ರಯಾಗ್ ರಾಜ್ : ಧಾರ್ಮಿಕ ಕಾರ್ಯಗಳ ಬದಲು ಹಣ ಸಂಪಾದನೆ ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿದ್ದ 13 ಮಹಾಮಂಡಲೇಶ್ವರರು (ಧಾರ್ಮಿಕ ಮುಖ್ಯಸ್ಥರು) ಮತ್ತು ಸಂತರನ್ನು ಅಖಿಲ ಭಾರತೀಯ ಅಖಾಡಾ ಪರಿಷತ್ (ಎಬಿಎಪಿ) ಉಚ್ಚಾಟಿಸಿದೆ. ಇದಲ್ಲದೇ 112 ಸಂತರಿಗೆ ನೋಟಿಸ್ ನೀಡಲಾಗಿದ್ದು, ನೋಟಿಸ್​ಗೆ ಸೂಕ್ತ ಉತ್ತರ ನೀಡದಿದ್ದರೆ ಅವರನ್ನು ಕೂಡ ಉಚ್ಚಾಟನೆಗೊಳಿಸಲು ಅಖಾಡಾ ಪರಿಷತ್ ಸಿದ್ಧವಾಗಿದೆ.

ಉಚ್ಛಾಟಿತ ಮಹಾಮಂಡಲೇಶ್ವರರು ಮತ್ತು ಸಂತರು ಎಬಿಎಪಿಯ ಆಂತರಿಕ ತನಿಖೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದಾರೆ ಹಾಗೂ ಇದೇ ಕಾರಣದಿಂದ ಅವರನ್ನು ಮಹಾ ಕುಂಭಮೇಳಕ್ಕಾಗಿ ನಿಷೇಧಿಸಲಾಗಿದೆ. "ನೋಟಿಸ್​ ಪಡೆದ 112 ಸಂತರು ಸೆಪ್ಟೆಂಬರ್ 30 ರೊಳಗೆ ಪ್ರತಿಕ್ರಿಯಿಸಬೇಕು, ತೃಪ್ತಿಕರ ಉತ್ತರ ಬರದಿದ್ದರೆ ಕ್ರಮ ಕೈಗೊಳ್ಳಲಾಗುವುದು. ಅಂತಹ ಸಂತರನ್ನು ಕುಂಭಮೇಳಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಗುವುದು" ಎಂದು ಅಖಾಡಾ ಪರಿಷತ್ ಹೇಳಿದೆ.

ಸಂತರ ವಿರುದ್ಧ ಏಪ್ರಿಲ್ ತಿಂಗಳಲ್ಲಿ ತನಿಖೆ ಆರಂಭಿಸಲಾಗಿದ್ದು, ಈಗಲೂ ಮುಂದುವರೆದಿದೆ. ಈವರೆಗೆ ಜುನಾ ಅಖಾಡ 54 ಸಂತರಿಗೆ, ಶ್ರೀ ನಿರಂಜನಿ ಅಖಾಡ 24 ಸಂತರಿಗೆ ಮತ್ತು ನಿರ್ಮೋಹಿ ಅನಿ ಅಖಾಡ 34 ಸಂತರಿಗೆ ನೋಟಿಸ್ ನೀಡಿದೆ. ಇದರಲ್ಲಿ 13 ಮಹಾಮಂಡಲೇಶ್ವರರು, 24 ಮಂಡಲೇಶ್ವರರು ಮತ್ತು ಮಹಾಂತರು ಸೇರಿದ್ದಾರೆ.

ನಿರ್ಮೋಹಿ ಅನಿ ಅಖಾಡದ ಅಧ್ಯಕ್ಷ ಮತ್ತು ಅಖಾರಾ ಪರಿಷತ್ (ಮಹಾನಿರ್ವಾಣಿ ಗುಂಪು) ಪ್ರಧಾನ ಕಾರ್ಯದರ್ಶಿ ಶ್ರೀಮಹಂತ್ ರಾಜೇಂದ್ರ ದಾಸ್ ಅವರು ಅರ್ಧ ಡಜನ್ ಸಂತರನ್ನು ಅಖಾಡದಿಂದ ಹೊರಹಾಕಿದ್ದಾರೆ. ನಾಸಿಕ್​​ನ ಮಹಾಮಂಡಲೇಶ್ವರ ಜಯೇಂದ್ರಾನಂದ ದಾಸ್, ಚೆನ್ನೈನ ಮಹಾಮಂಡಲೇಶ್ವರ ಹರೇಂದ್ರಾನಂದ್, ಅಹಮದಾಬಾದ್​ನ ಮಹಂತ್ ರಾಮ್ ದಾಸ್, ಉದಯಪುರದ ಮಹಂತ್ ಅವಧೂತಾನಂದ ಮತ್ತು ಕೋಲ್ಕತ್ತಾದ ಮಹಂತ್ ವಿಜಯೇಶ್ವರ್ ದಾಸ್ ಹೊರಹಾಕಲ್ಪಟ್ಟ ಪಟ್ಟಿಯಲ್ಲಿದ್ದಾರೆ.

ಇದಲ್ಲದೆ, ನಾಸಿಕ್​ನ ಎಂಟು, ಉಜ್ಜಯಿನಿಯ ಏಳು, ಹರಿದ್ವಾರದ ಆರು, ದ್ವಾರಕಾದ ಹತ್ತು ಮತ್ತು ರಾಂಚಿಯ ಒಬ್ಬ ಸಂತರಿಗೆ ನೋಟಿಸ್ ನೀಡಲಾಗಿದ್ದು, ಅವರ ಪ್ರತಿಕ್ರಿಯೆಯನ್ನು ಕೇಳಲಾಗಿದೆ.

ಮತ್ತೊಂದೆಡೆ, ಶ್ರೀ ನಿರಂಜನಿ ಅಖಾಡವು ಮಹಾಮಂಡಲೇಶ್ವರ ಮಂದಾಕಿನಿ ಪುರಿ ಅವಯನ್ನು ಹೊರಹಾಕಿದೆ ಮತ್ತು ಅವರ ವಿರುದ್ಧ ಪೊಲೀಸ್ ದೂರನ್ನು ಸಹ ದಾಖಲಿಸಿದೆ. ಇವರಲ್ಲದೆ, ಏಳು ಸಂತರನ್ನು ಹೊರಹಾಕಲಾಗಿದೆ.

ರಂಜನಿ ಅಖಾಡದ ಅಧ್ಯಕ್ಷ ಶ್ರೀಮಹಂತ್ ರವೀಂದ್ರ ಪುರಿ ಹೇಳಿದ್ದಿಷ್ಟು:ಈ ಬಗ್ಗೆ ಮಾತನಾಡಿದ ಎಬಿಎಪಿ ಮತ್ತು ಶ್ರೀ ನಿರಂಜನಿ ಅಖಾಡದ ಅಧ್ಯಕ್ಷ ಶ್ರೀಮಹಂತ್ ರವೀಂದ್ರ ಪುರಿ, "ಆರು ಸಂತರ ಆಂತರಿಕ ತನಿಖೆಯಲ್ಲಿ, ಅನೇಕ ಮಹಾಮಂಡಲೇಶ್ವರರು ಮತ್ತು ಸಂತರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ನಿರಂಜನಿ ಅಖಾಡದ ಮಹಾಮಂಡಲೇಶ್ವರ ಮಂದಾಕಿನಿ ಪುರಿಯನ್ನು ಹೊರಹಾಕಲಾಗಿದ್ದು, ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಖಾಡದಿಂದ ಹೊರಹಾಕಲ್ಪಟ್ಟವರಿಗೆ ಮಹಾ ಕುಂಭ -2025 ಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ" ಎಂದು ಹೇಳಿದರು.

ನೋಟಿಸ್​​ಗೆ ಉತ್ತರಿಸದಿದ್ದರೆ ಕ್ರಮ:ಜುನಾ ಅಖಾಡದ ಅಂತಾರಾಷ್ಟ್ರೀಯ ವಕ್ತಾರ ಶ್ರೀಮಹಂತ್ ನಾರಾಯಣ್ ಗಿರಿ ಮಾತನಾಡಿ, "ಸಂತರ ಕಾರ್ಯಚಟುವಟಿಕೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲವರ ಚಟುವಟಿಕೆಗಳು ಅನುಮಾನಾಸ್ಪದವಾಗಿವೆ. ಅವರಿಗೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೇಳಲಾಗಿದೆ. ಸರಿಯಾದ ಉತ್ತರ ಸಿಗದಿದ್ದರೆ ಅವರನ್ನು ಹೊರಹಾಕಲಾಗುವುದು" ಎಂದು ಎಚ್ಚರಿಕೆ ನೀಡಿದರು.

ಪ್ರತಿಯೊಂದು ಅಖಾಡವನ್ನು ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಸಚಿವರು, ಉಪ ಸಚಿವರು, ಕೊತ್ವಾಲ್, ಧನಪತಿ ಮುಂತಾದ ಅಧಿಕಾರಿಗಳು ನಡೆಸುತ್ತಾರೆ. 15 ರಿಂದ 20 ವರ್ಷಗಳ ಕಾಲ ಸಮರ್ಪಣೆಯಿಂದ ಕೆಲಸ ಮಾಡಿದ ಅಧಿಕಾರಿಗಳಿಗೆ ಅಖಾಡದಲ್ಲಿ ಸ್ಥಾನಗಳನ್ನು ನೀಡಲಾಗುತ್ತದೆ. ಅವರನ್ನು ಚುನಾವಣೆಯ ಮೂಲಕ ನೇಮಕ ಮಾಡಲಾಗುತ್ತದೆ. ಅದೇ ಸಮಯದಲ್ಲಿ, ಐದು ಹಿರಿಯ ಮತ್ತು ವಿದ್ವಾಂಸ ಸದಸ್ಯರಿಗೆ ಪಂಚ ಪರಮೇಶ್ವರ ಎಂಬ ಬಿರುದನ್ನು ನೀಡಲಾಗುತ್ತದೆ. ಅವರು ಆಶ್ರಮ, ಮಠ ದೇವಾಲಯ, ಅಖಾಡದ ಗುರುಕುಲವನ್ನು ನಡೆಸುತ್ತಾರೆ.

ಅಧಿಕಾರಿಗಳು ಮತ್ತು ಅಖಾಡಗಳ ಪಂಚರು ಎಲ್ಲಾ ಸಂತರ ಮೇಲೆ ಕಣ್ಣಿಟ್ಟಿರುತ್ತಾರೆ. ಯಾವ ಸಂತರ ವಿರುದ್ಧ ದೂರುಗಳು ಬರುತ್ತವೆಯೋ ಮತ್ತು ಅವರ ಚಟುವಟಿಕೆಗಳು ಅನುಮಾನಾಸ್ಪದವಾಗಿದ್ದರೆ, ಸಂಬಂಧಪಟ್ಟ ಅಖಾಡದ ಕಾರ್ಯದರ್ಶಿ, ಸಚಿವರು, ಜಂಟಿ ಸಚಿವರ ಮಟ್ಟದ ಅಧಿಕಾರಿಯನ್ನು ಅಲ್ಲಿಗೆ ಕಳುಹಿಸಲಾಗುತ್ತದೆ. ಅವರು ಪ್ರಕರಣದ ಸ್ಥಳಕ್ಕೆ ಹೋಗಿ 15 ರಿಂದ 20 ದಿನಗಳ ಕಾಲ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಈ ವರದಿಯನ್ನು ಅಖಾಡದ ಪಂಚ ಪರಮೇಶ್ವರರ ಮುಂದೆ ಇಡಲಾಗುತ್ತದೆ. ಎಲ್ಲಾ ಅಂಶಗಳನ್ನು ಚರ್ಚಿಸಿದ ನಂತರ, ಹೊರಹಾಕಲು ಅಥವಾ ನೋಟಿಸ್ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ : 'ಬಿಜೆಪಿಯ ತಪ್ಪು ನೀತಿಗಳಿಂದ ಯೋಧರ ಸಾವು': ದೋಡಾ ಘಟನೆಗೆ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ - Doda encounter

ABOUT THE AUTHOR

...view details